ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Wednesday, July 23, 2014

ಮಾರು

ಚಾಮರಾಜನಗರದಲ್ಲಿ 'ಮಾರು' ಎಂಬ ಪದವನ್ನು 'ಗಿಡ-ಮರಗಳಿಗೆ ತಗುಲುವ ರೋಗ'(disease) ಎಂಬ ಹುರುಳಿನಲ್ಲಿ ಬಳಸುತ್ತಾರೆ.

ಬಳಕೆ:
೧. ಈ ಬಾಳೆಗಿಡಕ್ಕೆ ಮಾರು ಬಂದಿದೆ
೨. ಈ ಕರುಬೇವಿನ ಮರಕ್ಕೆ ಮಾರು ಬಂದಿದೆ
೩. ಈ ಕರುಬೇವಿನ ಎಲೆಗಳಲ್ಲಿ ಬಿಳಿ ಕಲೆ ಕಾಣಿಸಿಕೊಂಡಿರುವುದರಿಂದ ಇದಕ್ಕೆ ಮಾರು ತಗುಲಿದೆ ಎಂದು ಹೇಳಬಹುದು

ಮಾರು - DED 4834

Ka. māṟu to be opposite, be hostile, oppose ( verb)
     state of being opposite or hostile (noun)

ಯಾವುದೇ ಗಿಡ-ಮರಕ್ಕೆ ರೋಗ ಎಂಬುದು ವಿರೋದಿಯಾಗಿ ಕಂಡುಬರುತ್ತದೆ. ರೋಗವು ಗಿಡ-ಮರಗಳ ಬೆಳವಣಿಗೆಗೆ ತಡೆ/ವಿರೋದ ಒಡ್ಡುತ್ತದೆ. ರೋಗದ ಹರಡಿಕೆ ಹೆಚ್ಚಾದರೆ ಗಿಡ-ಮರಗಳು ಸಾಯಲೂಬಹುದು.
ಆದ್ದರಿಂದ ಇಂತಹ ವಿರೋದಿ ಗುಣವನ್ನು ಹೊಂದಿರುವ 'ರೋಗ'ಕ್ಕೆ ಕನ್ನಡದಲ್ಲಿ ಹೀಗೆ 'ಮಾರು' ಎಂಬ ಪದ ಬಳಕೆ ಚಾ.ನಗರದ ಹಳ್ಳಿಗಳಲ್ಲಿ ಕಂಡುಬರುತ್ತದೆ. 'ಮಾರು' ಎಂಬುದು 'ವಿರೋದಿತನ'ಕ್ಕೆ ಸಾಟಿಯಾದ ಪದವಾಗಿದೆ.

ಮಾರು ಎಂಬುದಕ್ಕೆ ಇನ್ನೊಂದು ಹುರುಳೂ ಇದೆ.
Ka. change;

ಇದಲ್ಲದೆ ರೋಗ ತಗುಲಿದ ಗಿಡದಲ್ಲಿ ಕೆಲವು ಕಣ್ಣಿಗೆ ಕಾಣುವ ಬದಲಾವಣೆಗಳು ಕಂಡುಬರುತ್ತವೆ. ಅದರ ಮೇಲೆ ಕಲೆಗಳು ಬರುವುದು, ಬೆಳವಣಿಗೆ ಕುಂಟಿತವಾಗುವುದು. ಹೀಗೆ ರೋಗ ಬಂದಾಗ ಬದಲಾವಣೆಗಳು(changes) ಆಗುವುದರಿಂದ ರೋಗಕ್ಕೆ 'ಮಾರು' ಎಂಬ ಪದ ಬಳಕೆ ಬಂದಿರಬಹುದು

Thursday, June 5, 2014

ಮಾದಪ್ಪ


ಈ ಪದ ಕಂಡಾಗ ನೆನಪಿಗೆ ಬರುವುದು ಕೊಳ್ಳೇಗಾಲದ ಹತ್ತಿರ ಇರುವ ಮಲಯ್ ಮಾದಪ್ಪನ ಬೆಟ್ಟ. ಇದಲ್ಲದೆ ಮಾದಪ್ಪ, ಮಾದೇಶ, ಮಾದಯ್ಯ ಎಂಬ ಹೆಸರುಗಳು ನೆನಪಿಗೆ ಬರುತ್ತವೆ. ಹಾಗಾದರೆ ಮಾದಪ್ಪ ಎಂಬ ಪದದ ಹುಟ್ಟು ಹೇಗೆ ಬಂತು ಎಂದು ನೋಡಿದಾಗ ನಮಗೆ ಕೆಳಗಿನ ಪದಗಳು ಕಣ್ಣಿಗೆ ರಾಚುತ್ತವೆ.

ಮಾಣ್ Ka. māṇ to heal, be healed or cured. [DED -4804]
ಮಾಯ್ Ka. māy to be healed, cured. Go. (G. Mu. Ma.) māy- to be healed [DED-4815]
ಮಾಯ್ Ka. māy to be hidden, disappear, pass away; ಮಾಯಿಸು māyisu to cause to disappear; ಮಾಯ māya disappearance, vanishing; ಮಾಜು māju to cause to grow dim, cause to disappear, hide, conceal; n. hiding, dissimulation, deceit, fraud; ಮಾಂಜು māñju to conceal, suppress the truth; ಮಾಂಜಿಸು māñjisu to cause to grow dim or disappear [DED-4814]

ಮಾಣ್, ಮಾಯ್ ಎಂದರೆ ಬೇನೆ ಇಲ್ಲವೆ ಗಾಯ ವಾಸಿಯಾಗುವ ಇಲ್ಲವೆ ಗುಣವಾಗುವ ಕ್ರಿಯೆಯನ್ನು ಸೂಚಿಸುತ್ತದೆ. ಹಿಂದೆಲ್ಲ ಜನಪದರಲ್ಲಿ ಕೆಲವು ಮಟ್ಟಿಗೆ ಮದ್ದರಿಮೆ ಇದ್ದುದಾದರೂ ಕೆಲವೊಮ್ಮೆ ಕಯ್ ಮೀರಿ ಸಾವು-ನೋವುಗಳು ಆಗುತ್ತಿದ್ದವು.  ಈಗ ನಮ್ಮ ಮುಂದಿರುವ  ’ಮಲಯ್ ಮಾದಪ್ಪನ ಕಾವ್ಯ’ದಲ್ಲಿರುವಂತೆಯೇ ಮಾದಪ್ಪ, ಗುಡ್ಡಗಾಡಿನ ಮಂದಿಗೆ ಸೋಜಿಗವೆನಿಸುವಂತಹ ಕೆಲವು ಪವಾಡಗಳನ್ನು ಮಾಡಿದಾಗ ಇದರಿಂದ ಅವರ ಬದುಕಿನ ಕಶ್ಟ-ಕೋಟಲೆಗಳು ಬಗೆಹರಿದುದರಿಂದ ಕಶ್ಟ-ಕೋಟಲೆಗಳನ್ನು ಮಾಯಿಸಿದ ಅಂದರೆ ಕಾಣದಹಾಗೆ ಮಾಡಿದ ಇಲ್ಲವೆ ವಾಸಿ ಮಾಡಿದವನೇ ಮಾದಪ್ಪ ಎಂದು ನಂಬಿದ್ದರು.

ಪದದ ಬಿಡಿಸಿಕೆ ಹೀಗಿದೆ:-

ಮಾಯ್ - ಈ ಪದದ ಹಿಂಬೊತ್ತಿನ ರೂಪ ’ಮಾಯ್ದ’/ಮಾಣ್ದ ಆಗುತ್ತದೆ. ಇದಕ್ಕೆ ’ಅ’ ಎಂಬ ವ್ಯಕ್ತಿಸೂಚಕ ಒಟ್ಟನ್ನು ಸೇರಿಸಿದರೆ ಮಾಯ್ದ+ಅ =ಮಾಯ್ದ ಎಂಬ ಪದವೇ ಸಿಗುತ್ತದೆ. ಇದೇ ಸವೆತದಿಂದಾಗಿ ’ಮಾದ’ ಎಂದು ಮಾರ‍್ಪಾಟಾಗಿದೆ. ಇಂತಹ ವಾಸಿ ಮಾಡುವಂತಹ ಇಲ್ಲವೆ ಗುಣಮಾಡುವಂತಹ ಅಳವನ್ನು ಹೊಂದಿರುವ ’ಅಪ್ಪ’ನೇ ಮುಂದೆ ’ಮಾದಪ್ಪ’ನಾದ. ಇಲ್ಲಿ ’ಅಪ್ಪ’ ಎಂಬುದು ಅಳವು ಸೂಚಕ ಪದವಾಗಿದೆ. ಇದಲ್ಲದೆ ಈ ಜನಪದ ಹಾಡಿನಲ್ಲಿ ಮಾದಪ್ಪ ಎಂಬ ಪದದಲ್ಲಿರುವ ’ಮಾಯ್’ ಎಂಬ ಬೇರುಪದ ತಿಳಿಯಾಗಿ ಕಾಣಿಸುತ್ತದೆ.

ಚೆಲ್ಲಿದರೂ ಮಲ್ಲಿಗೆಯ ಬಾನ ಸೂರೇರಿ ಮ್ಯಾಗೆ
ಅಂದಾದ ಚೆಂದಾದ  ಮಾಯ್-ಕಾರ ಮಾದೇವ್ಗೆ
ಚೆಲ್ಲಿದರೂ ಮಲ್ಲಿಗೆಯ


ಈ ಪದವನ್ನು ಇನ್ನೊಂದು ಬೇರುಪದದ ಮೂಲಕ ಕೊಂಚ ಬೇರೆಯಾದ ಹುರುಳಿನೊಂದಿಗೆ ಬಿಡಿಸಬಹುದು.
ಮಾ Ka. mā great, in: ಮಾ-ಗೆಲಸ mā-gelasa great work, ಮಾ-ಮಾಯಿ mā-māyi great mother [DED-4786]

ಮಾ+ ಹಯ್ದ = ಮಾಹಯ್ದ= ಮಾದ , ಮಹಾಮಾನವ (The great man) ಎಂಬ ಬಿರುದುಗಳು/ಹುರುಳು ಮೇಲೆ ಹೇಳಿದ ಎಲ್ಲ ಕಾರಣಗಳಿಂದ ಮಾದಪ್ಪನಿಗೆ ಹೊಂದುತ್ತದೆ.  

Tuesday, April 8, 2014

ಕುರಿಕೆ, ಕುರ‍್ಕೆ, ಕುಕ್ಕೆ

ಪಾಲ್ಕುರಿಕೆ, ಕುಕ್ಕೆ ಸುಬ್ರಮಣ್ಯ, ಮೇಟಿಕುರ‍್ಕೆ ಎಂಬ ಊರಿನ ಹೆಸರುಗಳನ್ನು ಗಮನಿಸಬಹುದು. ಇವುಗಳಲ್ಲಿರುವ ಪದ ’ಕುರಿಕೆ’ ಎಂಬುದು ತಿಳಿಯಾಗಿ ಕಾಣುತ್ತದೆ.

ಕುರಿಕೆ ಎಂಬುದಕ್ಕೆ ’ಹಳ್ಳಿ’ ಎಂಬ ಹುರುಳನ್ನು ಕೊಡಲಾಗಿದೆ
ಕುರಿಕೆ(<ಕುಱಿಕೆ) Ka. kuṟike village. [DED 1844]

ಇಲ್ಲಿ ಪಾಲ್ಕುರಿಕೆ ಎಂದರೆ ಹಾಲುಹಳ್ಳಿ, ಮೇಟಿಕುರಿಕೆ(ಮೇಟಿಕುರ‍್ಕೆ) ಎಂದರೆ ರಯ್ತರಹಳ್ಳಿ ಎಂತಲೂ ಹುರುಳು ಬರುತ್ತದೆ.
ಕುರುಬ, ಕುರುಂಬ Ka. kuṟuba man of the shepherd caste; kuṟumba a caste of mountaineers [DED 1844]
 
ಕುರುಬ, ಕುರುಂಬ ಮತ್ತು ಕುರಿಕೆ ಎಂಬ ಎರಡೂ ಪದಗಳು ಒಂದೇ ಬೇರುಪದದಿಂದ ಬಂದಿದೆ ಎಂದು ದ್ರಾವಿಡಿಯನ್ ಪದನೆರಕೆಯಲ್ಲಿ ಕೊಡಲಾಗಿದೆ. ಆದ್ದರಿಂದ ಕುರುಬರು(ಕುರಿ ಸಾಕುವವರು) ಇಲ್ಲವೆ ಕುರುಂಬರು(ಬೆಟ್ಟದಲ್ಲಿ ವಾಸಿಸುವವರು) ಹೆಚ್ಚಾಗಿ ವಾಸಿಸುವ ಊರಿಗೆ ಕುರಿಕೆ ಎಂಬ ಪದದ ಬಳಕೆ ಬಂದಿರಬಹುದು. ಪಾಲ್ಕುರಿಕೆ ಎಂಬುವಲ್ಲಿ ’ಹಾಲು’ ಎಂಬ ಪದವಿದೆ. ಹಾಲಿಗೂ, ಕುರುಬರಿಗೂ ಬಿಡಿಸಲಾರದ ನಂಟಿದೆ. ಇನ್ನು ಕುಕ್ಕೆ ಸುಬ್ರಮಣ್ಯ ಹಳ್ಳಿಯು ಬೆಟ್ಟದ ಕಣಿವೆಯಲ್ಲಿರುವ ಒಂದು ಊರು.
ಕುರ‍್ಕೆ ಎಂಬ ಪದ ’ಕುಕ್ಕೆ’ ಆಗುವುದಕ್ಕೆ ಹೊಸಗನ್ನಡದಲ್ಲಿ ಅನುವಿದೆ ಯಾಕಂದರೆ ಹೊಸಗನ್ನಡದಲ್ಲಿ ’ರ್’ ಕಾರದ ಮುಂದೆ ಕ,ಚ,ಟ,ತ,ಪ ದಂತಹ ಮುಚ್ಚುಲಿಗಳು ಬಂದಾಗ ’ರ್’ ಕಾರ ಬಿದ್ದುಹೋಗಿ ಮುಚ್ಚುಲಿ ಇಮ್ಮಡಿಯಾಗುತ್ತದೆ. ಎತ್ತುಗೆಗೆ:-
 
ಸುರ‍್ಕು -> ಸುಕ್ಕು
ಉರ‍್ಚು -> ಉಚ್ಚು
ಕರ‍್ತಲೆ -> ಕತ್ತಲೆ
ಇರ‍್ಪ  -> ಇಪ್ಪ

ತೇಟ್

ಆಡುನುಡಿಯಲ್ಲಿರುವ ಬಳಕೆ:-

೧. ಅವ್ನ್ ನೋಡು, ತೇಟ್ ಅವರ ಅಪ್ಪನ್ ತರಾನೆ ಅವ್ನೆ
೨. ಇವರೇನು ಅವಳಿ-ಜವಳಿನಾ? ತೇಟ್ ಒಂದೇ ತರ ಅವ್ರೆ

ಇದರಲ್ಲಿ ತೇಟ್ ಎಂಬುದಕ್ಕೆ clearly/certainly ಎಂಬ ಹುರುಳುಗಳಿವೆ. ಇಂತಹ ಹುರುಳಿರುವ ಪದಗಳನ್ನು ಪದನೆರಕೆಯಲ್ಲಿ ಹುಡುಕಿದಾಗ
ತೇಟ, ತೇಟೆ Ka. tēṭa, tēṭe clearness, purity (as that of water, etc.); [DED 3471]

ಇದರ ತಮಿಳಿನಲ್ಲಿರುವ ಸಾಟಿ ಪದಗಳು
ತೇಱ್ಱಮ್(ತೇಟ್ರಮ್) Ta. tēṟṟam certainty, assurance, determination, clearness [DED 3471]

ಯಾವುದೇ ವಿಶಯವನ್ನು ಒತ್ತಿ ಇಲ್ಲವೆ ನಿಕ್ಕಿಯಾಗಿ ಹೇಳಬೇಕಾದರೆ ’ತೇಟ್’ ಪದದ ಬಳಕೆಯು ಕಂಡು ಬರುತ್ತದೆ.

 

Friday, April 4, 2014

ತೊತ್ತು, ದುಡಿ


ತೊತ್ತು ಮತ್ತು ದುಡಿ ಎಂಬ ಬಳಕೆಗಳು ಸಾಮಾನ್ಯವಾಗಿವೆ.

. "ಸಲೆಯಾಳಿಗೊಂಬವರ ತೊತ್ತಿನ ಮಗ" - ಬಸವಣ್ಣನ ವಚನ
. ದುಡಿಯುವವರಿಗೆ ಕೂಲಿಯನ್ನು ಕೊಡಬೇಕು

ತೊತ್ತು ಎಂಬ ಪದವೇ ತುೞಿಲ್, ತೊೞ್ತು ಎಂಬ ಹಳಗನ್ನಡದ ಪದಗಳಿಂದ ಬಂದಿದೆ.

ತುೞಿಲ್ Ka. tur̤il work, servitude, slavery; tor̤tu, tottu (a male, but esp. also a female) servant, a strumpet. [DED 3524]
ದುಡಿ ಎಂಬ ಪದದ ಹುರುಳು ಹೀಗಿದೆ
ದುಡಿ - Ka. duḍi to labour, acquire by one's labour or efforts; duḍita acquisition, gain; duḍime acquiring, requisition, gain [DED 3295]  Cf. 3524
 
 
ದ್ರಾವಿಡಿಯನ್ ಪದನೆರಕೆಯಲ್ಲಿ ಈ ಎರಡು ಪದಗಳಿಗೆ ನಂಟನ್ನು ಕಲ್ಪಿಸಲಾಗಿದೆ. ಇದು ಎರಡು ಪದಗಳ ಹುರುಳಿಗೆ ಇರುವ ಹೋಲಿಕೆಯನ್ನು ತೋರಿಸುತ್ತದೆ. ದುಡಿತ ಮಾಡದೆ ತೊತ್ತು(ದಾಸ) ಆಗಲಾಗದು. ದುಡಿತವಿಲ್ಲದೆ ಕೆಲಸ(ತುೞಿಲ್) ಮಾಡಲಾಗದು

ಇನ್ನು ಉಲಿಯರಿಮೆಯ ಕಣ್ಣಿನಿಂದ ಈ ಪದಗಳನ್ನು ನೋಡಿದಾಗ ಇವುಗಳಿಗಿರುವ ಹತ್ತಿರವನ್ನು ಅರಿತುಕೊಳ್ಳಬಹುದು.
                                  ತುೞಿ(ಲ್) ==> ದುಡಿ

ತು=>ದು  ’ತ’ ಎಂಬ ಕೊರಲಿಸದ ಉಲಿಯು ’ದ’ ಎಂಬ ಕೊರಲಿಸಿದ ಉಲಿಯಾಗಿ ಮಾರ‍್ಪಾಟಾಗಿರುವುದು
ೞಿ=>ಡಿ    ಇನ್ನು ಕನ್ನಡ ನುಡಿಯ ಹಿನ್ನಡವಳಿಯಲ್ಲಿ "ೞ್ಕಾರವು /ಕಾರವಾಗಿರುವುದಕ್ಕೆ ಹಲವು ಎತ್ತುಗೆಗಳು ಇಲ್ಲಿ ಸಿಗುತ್ತವೆ

Friday, January 3, 2014

ಮುಳ್ಳು-ಮೊಳೆ

ಮುಳ್ಳು ಪದದ ಕೆಲವು ಬಳಕೆಗಳು :-

೧. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು
೨. ಇದು ಮಗ್ಗುಲ ಮುಳ್ಳಾಗಿ ಕಾಡುತ್ತಿದೆ
೩. ಮುಳ್ಳೇ ಇಲ್ಲದ ಗುಲಾಬಿ ಹೂವಿಲ್ಲ
೪. ಈ ಗಡಿಯಾರದಲ್ಲಿ ದೊಡ್ಡ ಮುಳ್ಳು ಮುರಿದದೆ
೫. ಈ ತಕ್ಕಡಿ ಮುಳ್ಳು ಆ ಕಡೆಗೆ ವಾಲಿದೆ
೬. ಅವರು ಮುಳ್ಳುಚಮಚದಲ್ಲಿ ಹಣ್ಣನ್ನು ತೆಗೆದುಕೊಂಡು ತಿನ್ನುತ್ತಾರೆ

ಮುಳ್ಳು ಎಂಬ ಪದಕ್ಕೆ ಹಲವು ರೂಪಗಳು ಮತ್ತು ಹುರುಳುಗಳಿವೆ
ಮುಳ್, ಮುಳು, ಮುಳ್ಳು Ka. muḷ, muḷu, muḷḷu thorn, pointed thing as a prickle, a sting, spur, hand of a clock, tongue of a balance, etc.; vb. to prick, sting; muḷuhu pricking, stinging, goading, goad; muḷḷa hand of a clock; muḷḷu fork [DED 4995]

DED ಅಲ್ಲಿ ಇದನ್ನು ಇನ್ನೊಂದು ಬೇರುಪದಕ್ಕೆ ಕೊಂಡಿಸಲಾಗಿದೆ.  Cf. 4998

ಮೊಳೆ Ka. moḷe pin, nail, spike, wedge, peg, stake, pointed object.[DED 4998]

ಮೊಳೆ ಪದದ ಬಳಕೆಗಳು
೧. ಈ ಗೋಡೆಗೆ ಮೊಳೆ ಹೊಡೆದಿದ್ದಾರೆ
೨. ಇಲ್ಲಿ ಶಾಮಿಯಾನ ಹಾಕಲು ದೊಡ್ಡ ದೊಡ್ಡ ಮೊಳೆಗಳನ್ನು ನಾಟಲಾಗಿದೆ

ಇವೆರಡೂ ಬೇರುಪದಗಳ ಹುರುಳಾದ ಚೂಪುತನದ ಮೇಲೆಯೇ ಇವನ್ನು ಕೊಂಡಿಸಲಾಗಿದೆ. ಆದರೆ ಮುಳ್ಳು(thorn) ಎಂಬುದು ತಾನಾಗಿಯೇ ಸುತ್ತಣದಲ್ಲಿ ದೊರೆಯುವುದು ಆದರೆ ಮೊಳೆ(nail) ಎಂಬುದು ಮಾನವನಿಂದ ಉಂಟಾದ ವಸ್ತು. ಹಾಗಾಗಿ ಒಂದು ಹೆಜ್ಜೆ ಮುಂದೆ ಹೋಗಿ ಮುಳ್ಳಿನಿಂದಲೇ ಮೊಳೆ ಎಂಬ ಪದದ ಹುಟ್ಟಿರಬಹುದೆಂದು ಹೇಳಬಹುದಾಗಿದೆ.