ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Saturday, January 19, 2013

ತಬ್ಬಲಿ

ಬಳಕೆ:
೧. ಆ ಹುಡುಗನನ್ನು ತಬ್ಬಲಿ ಮಾಡಬೇಡಿ
೨. ಅವನು ತಾಯಿ ಇಲ್ಲದ ತಬ್ಬಲಿ ಎಂದು ಇವರೇ ಅವನನ್ನು ಸಾಕಿದರು

ಬಿಡಿಸಿಕೆ:
     ತಬ್ಬು + ಇಲಿ = ತಬ್ಬಿಲಿ => ತಬ್ಬಲಿ

ತರ್ಬು, ತಬ್ಬು tarbu, tabbu to embrace ; n. an embrace  [DED 3116]

ಇಲ್ಲ, ಇಲ  ila a man who has not [DED 2559]
ಇಲಿ one who has not

ಅಂದರೆ ಯಾವ ಮನುಶ್ಯನಿಗೆ/ಮಗುವಿಗೆ ತಬ್ಬಿ ಮುದ್ದಾಡುವ ತಂದೆ, ತಾಯಿ, ಅಕ್ಕ, ಅಣ್ಣ, ತಮ್ಮ, ತಂಗಿ ಇವರು ಯಾರೂ ಇರುವುದಿಲ್ಲವೊ ಅವರನ್ನು ತಬ್ಬಲಿ ಎನ್ನಬಹುದಾಗಿದೆ.

Sunday, January 13, 2013

ಉಕ್ಕಡ

ಬಳಕೆಗಳು
೧. ಮಯ್ಸೂರಿನಲ್ಲಿ  ಎಲೆ ಉಕ್ಕಡ ಇದೆ; ಇದು ಆಗ ಊರಿನ ಆಚೆಯಲ್ಲಿತ್ತು

ಉಕ್ಕಡಮನೆ -  ಊರಾಚೆಯ ಮನೆ
ಉಕ್ಕಡಹೊಲ  - ಊರಾಚೆಯ ಹೊಲ

ಬಿಡಿಸಿಕೆ:-

ಉರು(<ಉಱು,ಊರ್)+ ಕಡೆ = ಉರ್ಕಡೆ = ಉಕ್ಕಡೆ => ಉಕ್ಕಡ

ಅಂದರೆ  ಊರಿನ (ಹಳ್ಳಿ, ಪಟ್ಟಣ ಆಗಿರಬಹುದು) ಕಡೆಯಲ್ಲಿರುವ/ಆಚೆಯಲ್ಲಿರುವ ಜಾಗವೇ  ’ಉಕ್ಕಡ’. ಈ ಜಾಗದಲ್ಲಿ ಮನೆ, ಹೊಲ ಇಲ್ಲವೆ ಕಾವಲು(guard/watch) ಕೂಡ ಇರಬಹುದಾಗಿತ್ತು.

Ka. ukkaḍa entrenchment about a camp, advanced guard, watch, guardhouse, end or outermost post of a town or village [DED 565]
Ka. ūr village, town  [DED 752]
Ka. uṟu (urt-, utt-) to be, stay [DED 710]

ಆರಂಬ

’ಆರಂಬ’ ಎಂಬ ಪದ ಹಳೆ ಮಯ್ಸೂರಿನ ಕಡೆ ಬಳಕೆಯಲ್ಲಿದೆ

೧. ನಾವು ಆರಂಬ ಮಾಡಿ ಬದುಕನ್ನು ಸಾಗಿಸುತ್ತೇವೆ
೨. ಇವರ ಇಬ್ಬರು ಮಕ್ಕಳಲ್ಲಿ ಇವನೇ ಆರಂಬಕಾರ

ಆರಮ್ಬ(ಆರಂಬ) ಎಂಬ ಪದಕ್ಕೆ  ಕಿಟ್ಟೆಲ್ ಪದನೆರಕೆಯಲ್ಲಿ ಪುಟ ೧೬೩ರಲ್ಲಿ Tilling, Cultivation ಎಂಬ ಹರುಳನ್ನು ಕೊಡಲಾಗಿದೆ. 

ಇದಲ್ಲದೆ  ಕಾಡಾರಂಬ (Dry Cultivation) , ನೀರಾರಂಬ (Wet Cutltivation) ಮತ್ತು ಆರಂಬಕಾರ(cultivator, farmer) ಎಂಬ ಪದಬಳಕೆಗಳೂ ಇವೆ.

ಬಿಡಿಸಿಕೆ:-

ಆರ್+ಮ್ಬು

ಇಲ್ಲಿ,
ಆರ್, ಏರ್ ಎಂಬುದಕ್ಕೆ ಈ ಹುರುಳಿದೆ  Ka. ēru, ār pair of oxen yoked to a plough.[DED 2815]  ಅಂದರೆ ನೇಗಿಲಿಗೆ ಹೊಂದಿಸಿ ಉಳುಮೆಗೆ ಅಣಿಯಾದ ಜೊತೆ ಎತ್ತುಗಳು ಎಂಬ ಹುರುಳಿದೆ.

ಮ್ಬು ಎಂಬ ಒಟ್ಟು ಈ ಹೆಸರು ಪದಗಳಲ್ಲಿರುವುದನ್ನು ಗಮನಿಸಬಹುದು

ತೆಮ್ಬು (ತೆನ್)
ಇಮ್ಬು (ಇರು)
ಕೊಮ್ಬು (ಕೊ)
ಚೆಂಬು  (ಚೆನ್)

ಅಂಕೆ

ಅಂಕೆ ಎಂಬುದರ ಬಳಕೆಗಳು ಹೀಗಿವೆ.

೧. ಅವನನ್ನು ಅಂಕೆಯಲ್ಲಿಟ್ಟುಕೊಳ್ಳದಿದ್ದರೆ ನಿನಗೆ ಮುಂದೆ ತೊಂದರೆಯಾಗುತ್ತದೆ.
೨. ಬೆಂಗಳೂರಿನಲ್ಲಿ ಅಂಕೆ ತಪ್ಪಿರುವ ಪ್ಲಾಸ್ಟಿಕ್ ಬಳಕೆ
೩. ಈ ಮಾವುತ ಆನೆಯನ್ನು ಅಂಕೆಯೊಳಗೆ ಇಟ್ಟುಕೊಂಡಿದ್ದಾನೆ

ಕಿಟ್ಟೆಲ್ ಅವರು ತಮ್ಮ ಪದನೆರಕೆಯಲ್ಲಿ  ಇದು ’ಅಡಕು’ ಎಂಬ ಪದದಿಂದ ಬಂದಿರಬಹುದೆಂಬ ಅನುಮಾನವನ್ನು ಮುಂದಿಟ್ಟಿದ್ದಾರೆ. ಆ ಆನುಮಾನವನ್ನೇ ಬೆನ್ನತ್ತಿದಾಗ

ಆಪು , ಅಂಕೆ  Ka. āpu restraint, stoppage; aṅke an order, command, control, restraint; [DED 340]

ಅಡಕು aḍaku to press, press into narrower compass, pack, subdue, control [DED 63]
ಅಡಚು aḍacu to press down, pack, stuff in, be humble, silence, shut as the mouth; [DED 63]
ಅಡಕ aḍaka pressing into narrow compass, contracting, shrinking, hiding oneself, hiding place, being comprehended or contained in, abridgement; [DED 63]
ಅಕ್ಕು akku to subdue, bring under control[DED 63]

ಮೇಲಿನ ಪದಗಳನ್ನು ಗಮನಿಸಿದಾಗ  ಅಡಕು ಎಂಬುದು ’ಸೀಮಿತಗೊಳಿಸು’/ಅದುಮು ಎಂಬ ಹುರುಳನ್ನು ಕೊಡುತ್ತದೆ ಎಂಬುದನ್ನು ತಿಳಿಯಬಹುದು.

ಹಾಗೆ,  ಅದೇ ಪದಬೇರಿನಲ್ಲಿ ಈ ಪದಗಳನ್ನೂ ಕೊಡಲಾಗಿದೆ
ಅಡಂಗು, ಅಡಗು Ka. aḍaṅgu, aḍagu to hide, be concealed  [DED 63]

ಯಾವುದೇ ವಸ್ತುವನ್ನು ಇಲ್ಲವೆ ವ್ಯಕ್ತಿಯನ್ನು ’ಅಂಕೆ’ಗೆ ತೆಗೆದುಕೊಳ್ಳುವುದು ಅಂದರೆ ಅದನ್ನು ’ಸೀಮಿತ’ಗೊಳಿಸುವುದು ಇಲ್ಲವೆ ಅಡಗಿಸುವುದೇ ಆಗಿದೆ.  ಹಾಗಾಗಿ 

ಅಡಂಗು <=>ಅಂಕೆ ಆಗಿರಬಹುದು ಎಂದು ಊಹಿಸಬಹುದಾಗಿದೆ.

Tuesday, November 13, 2012

ರೇಗು

'ರೇಗು' ಎಂಬ ಪದವು ಹಲವು ನೆಲೆಗಳಲ್ಲಿ ಬಳಕೆಯಲ್ಲಿದೆ

೧. ಅವನನ್ನು ಹಾಗೆ ರೇಗಬೇಡ. 
೨. ಇವನ ಮೇಲೆ ಅವನು ರೇಗುತ್ತಿದ್ದ.

ಈ ಮೇಲಿನ ಸೊಲ್ಲುಗಳನ್ನು ಹೀಗೆ ಹೇಳಿದರೆ ಹುರುಳಿನಲ್ಲಿ ಕೊಂಚ ವ್ಯತ್ಯಾಸ ಆಗುತ್ತದೆ.
೧. ಅವನ ಮೇಲೆ ಹಾಗೆ ಎರಗಬೇಡ
೨. ಇವನ ಮೇಲೆ ಅವನು ಎರಗುತ್ತಿದ್ದ.

ಈಗ 'ಎರಗು' ಎಂಬ ಪದವನ್ನು ನೋಡೋಣ.
ಎರಗು Ka. eṟagu to bow, be bent, crouch, come down, alight, fall upon, attack, enter, join, accrue to; n. a bow, obeisance; eṟagisu to cause to bow, etc.; eṟaka coming down, etc.; eṟaguha bowing, coming down, perching, etc. [DED - 516]

ಎರಗು => ಬೇರೊಬ್ಬರ ಮಯ್ಯ ಮೇಲೆಯೇ ಎರಗಿ ಹೋಗುವುದು, ಬೇರೊಬ್ಬರ ಮೇಲೆ ಯಾವುದೇ ಕಯ್ದುಗಳಿಂದ 'ಎರಗು'ವುದು
ರೇಗು => ಮಾತಿನ ಮೂಲಕ ಬೇರೊಬ್ಬರ ಮೇಲೆ 'attack' ಮಾಡುವುದು.

'ಎರಗು' ಎಂಬುದನ್ನು 'ಉಲಿಕದಲಿಕೆ'ಗೆ(metathesis) ಒಳಪಡಿಸಿದರೆ.

ಎರಗು ===ಉಲಿಕದಲಿಕೆ ಆದಮೇಲೆ==> ರೇಗು ಆಗುತ್ತದೆ

ಯಾಕಂದರೆ,
ಕನ್ನಡದಲ್ಲಿ(ಇಲ್ಲವೆ ದ್ರಾವಿಡ ನುಡಿಗಳಲ್ಲಿ )ಉಲಿಕದಲಿಕೆಯಾದಾಗ
"ಪದದ ಮೊದಲಲ್ಲಿರುವ ತೆರೆಯುಲಿಯು ಬಿದ್ದು ಹೋಗುತ್ತದೆ. ಮತ್ತು ಅದೇ ಗುಂಪಿನ ಉದ್ದ ತೆರೆಯುಲಿ ಪದದ ಎರಡನೇ ಬರಿಗೆಗೆ ಅಂದರೆ ಮುಚ್ಚುಲಿಗೆ ಬಂದು ಸೇರಿಕೊಳ್ಳುತ್ತದೆ"

ಕನ್ನಡದಲ್ಲಿ 'ಯ' ಮತ್ತು 'ವ' ಗುಂಪು ಎಂದು ತೆರೆಯುಲಿಗಳನ್ನು ಗುಂಪಿಸಬಹುದೆಂದು ಈ ಮಿಂಬರಹದಲ್ಲಿ ತೋರಿಸಿಕೊಡಲಾಗಿದೆ. ಅದರ ಪ್ರಕಾರ :-
ಯ - ಇ, ಈ, ಎ, ಏ,
ವ - ಅ,ಆ, ಉ, ಊ, ಒ, ಓ

ಆದ್ದರಿಂದ 'ಎರಗು' ಎಂಬುವಲ್ಲಿರುವ 'ಎ' ಕಾರವು ಬಿದ್ದುಹೋಗಿ ಅದರೆ 'ಉದ್ದತೆರೆಯುಲಿಯು' ಮುಂದಿರುವ 'ರ'ಕಾರಕ್ಕೆ ಬಂದು ಸೇರಿಕೊಂಡಿದೆ.

ಎ+ರ್+ಅ+ಗ್+ಉ => _+ರ್+ಏ+ಗ್+ಉ => ರೇಗು

Tuesday, November 6, 2012

ರಟ್ಟು/ರೊಟ್ಟು

ರಟ್ಟು ಅಂದರೆ ಜಿ.ವಿ.ಅವರ ಪದನೆರಕೆಯಲ್ಲಿ ಕೊಟ್ಟಿರುವುದು

೧ ದಪ್ಪ ಬಟ್ಟೆ, ಒರಟು ಬಟ್ಟೆ
೨ ಪುಸ್ತಕಕ್ಕೆ ಹಾಕುವ ಮೇಲುಹೊದಿಕೆ
೩ ಬರೆಯು ವುದಕ್ಕೆ ಅನುಕೂಲವಾಗುವಂತೆ ಕಾಗದದ ಅಡಿಯಲ್ಲಿಟ್ಟುಕೊಳ್ಳುವ ದಪ್ಪನಾದ ಕಾಗದ, ಹಲಗೆ ಮುಂ.ವು
ರಟ್ಟು ಎಂಬುದು ದಪ್ಪನಾಗಿ, ಒರಟಾಗಿ, ಗಟ್ಟಿಯಾಗಿ ಇರುವುದು. ಹಾಗಾಗಿ 'ಒರಟು' ಎಂಬ ಪದವನ್ನು ತೆಗೆದುಕೊಳ್ಳೋಣ.
ಉರಟು, ಉರಟ, ಉರುಟ, ಉರುಟು, ಉಟ್ಟು, ಒರಟು, ಒರ್ಟು  uraṭu, uraṭa, uruṭa, ur(u)ṭu, uṭṭu, oraṭu, orṭu coarseness (of cloth, thread, hair), thickness, stoutness [ DED 649 ]

ಅದನ್ನು 'ಉಲಿಕದಲಿಕೆ'ಗೆ(metathesis) ಒಳಪಡಿಸಿದರೆ.

ಒರಟು ===ಉಲಿಕದಲಿಕೆ ಆದಮೇಲೆ==> ರೋಟು ಆಗುತ್ತದೆ

ಯಾಕಂದರೆ,
 ಕನ್ನಡದಲ್ಲಿ(ಇಲ್ಲವೆ ದ್ರಾವಿಡ ನುಡಿಗಳಲ್ಲಿ )ಉಲಿಕದಲಿಕೆಯಾದಾಗ
   "ಪದದ ಮೊದಲಲ್ಲಿರುವ ತೆರೆಯುಲಿಯು ಬಿದ್ದು ಹೋಗುತ್ತದೆ. ಮತ್ತು  ಅದೇ ಗುಂಪಿನ ಉದ್ದ ತೆರೆಯುಲಿ ಪದದ ಎರಡನೇ ಬರಿಗೆಗೆ ಅಂದರೆ ಮುಚ್ಚುಲಿಗೆ ಬಂದು ಸೇರಿಕೊಳ್ಳುತ್ತದೆ"

ಕನ್ನಡದಲ್ಲಿ 'ಯ' ಮತ್ತು 'ವ' ಗುಂಪು ಎಂದು ತೆರೆಯುಲಿಗಳನ್ನು ಗುಂಪಿಸಬಹುದೆಂದು ಈ ಮಿಂಬರಹದಲ್ಲಿ ತೋರಿಸಿಕೊಡಲಾಗಿದೆ. ಅದರ ಪ್ರಕಾರ :-
ಯ - ಇ, ಈ, ಎ, ಏ,
ವ - ಅ,ಆ, ಉ, ಊ, ಒ, ಓ

ಆದ್ದರಿಂದ 'ಒರಟು' ಎಂಬುವಲ್ಲಿರುವ 'ಒ' ಕಾರವು ಬಿದ್ದುಹೋಗಿ ಅದರೆ 'ಉದ್ದತೆರೆಯುಲಿಯು' ಮುಂದಿರುವ 'ರ'ಕಾರಕ್ಕೆ ಬಂದು ಸೇರಿಕೊಂಡಿದೆ.

ಒ+ರ್+ಅ+ಟ್+ಉ => _+ರ್+ಓ+ಟ್+ಉ => ರೋಟು

ಇನ್ನು ಕನ್ನಡದಲ್ಲಿ ನಾಲ್ಕು ಉಲಿಗಳ ಪದಗಳಲ್ಲಿ ಅಂದರೆ 'ಮುತೆಮುತೆ' ( ಮು=ಮುಚ್ಚುಲಿ, ತೆ=ತೆರೆಯುಲಿ) ಮಾದರಿಯ ಪದಗಳಲ್ಲಿ ಮಾರ್ಪಾಗುವಾಗ ಕೆಲವು ಒಲವುಗಳನ್ನು ಗಮನಿಸಬಹುದು
     ಮುತೆಮುತೆ <=> ಮುತೆಮುಮುತೆ    
        ತಾಟು      <=> ತಟ್ಟೆ
         ಕೇಡು      <=> ಕೆಟ್ಟು
         ನೀಳ       <=> ನಿಟ್ಟು
         ಆಡೆ        <=> ಅಟ್ಟೆ (leech)
         ಪಾಡಿ      <=> ಪಟ್ಟಿ  (village, hamlet)
         ಪಾಚಿ      <=> ಪಚ್ಚೆ

ಎಡದಲ್ಲಿ ಕೊಟ್ಟಿರುವ ಪದಗಳಲ್ಲಿ ತಾ, ಕೇ, ನೀ, ಆ, ಪಾ ಎಂಬಲ್ಲಿರುವ ಉದ್ದ ತೆರೆಯುಲಿಯು ಮರ್ಪಾಟಾದ ಮೇಲೆ ಗಿಡ್ಡವಾಗುತ್ತದೆ. ಹೀಗೆ ಗಿಡ್ದವಾಗುವುದರಿಂದ ಆಮೇಲೆ ಬರುವ ಮುಚ್ಚುಲಿ ಇಮ್ಮಡಿಯಾಗುತ್ತದೆ. ಹಾಗಾಗಿ ಮೇಲಿನ ಪದಗಳಲ್ಲಿ ಟ್ಟೆ, ಟ್ಟು, ಚ್ಚೆ ಎಂಬ ಎಂಬ ಉಲಿಕಂತೆಯನ್ನು ಗಮನಿಸಬಹುದು.
     
ಹಾಗೆಯೇ,
    ರೋಟು <=> ರೊಟ್ಟು   ಅಂತ ಆಗಿದೆ

ಕನ್ನಡ ಉಲಿಯೊಲವು 'ಒ'ಕಾರ ಮತ್ತು 'ಅ'ಕಾರವನ್ನು ಒಂದೇ ಗುಂಪಿಗೆ ('ವ' ಗುಂಪಿಗೆ) ಸೇರಿಸುವುದರಿಂದ
       ರೊಟ್ಟು => ರಟ್ಟು  ಆಗುವುದು ಸಹಜವಾಗಿದೆ.

ಇದಕ್ಕೆ ಮಿಂಬಲೆಯಲ್ಲಿ ದೊರೆತ ಬಳಕೆ ಸೊಲ್ಲುಗಳು:-
೧. ಮಿಡತೆ, ದುಂಬಿ ಇತ್ಯಾದಿ ಮನೆಯೊಳಗೆ ಬಂದರೆ ರೊಟ್ಟು (card board) ಇಂದ ಹೊಡೆದು ಹೊರಗಟ್ಟುತ್ತಿದ್ದೆವು
೨. ಪಕ್ಕಕ್ಕ ಗೌಡತಿ ಕುಂತು ಒಂದು ನೋಟಬುಕ್ ರಟ್ಟ ತಗೋಂಡು  ಗಾಳಿ ಹಾಕಕ್ಕಿ...

Tuesday, October 30, 2012

ಅಕ್ಕಿ

ಅಕ್ಕಿಯೆಂಬುದು ನಮ್ಮ ಊಟ-ತಿಂಡಿಗಳಲ್ಲಿ ಹೆಚ್ಚು ಬಳಸುವ ದಾನ್ಯ. ಎಶ್ಟೊ ಮಂದಿಗೆ ಏನು ತಿಂದರೂ ಒಂದು ತುತ್ತು ಅನ್ನ ತಿನ್ನದಿದ್ದರೆ ಮನ ತಣಿಯುವುದಿಲ್ಲ. ಅಕ್ಕಿಯ ಮತ್ತು ಅದರಿಂದ ಮಾಡುವ ’ಅನ್ನ’ದ ಮೇಲೆ ಹಲವು ಗಾದೆಮಾತುಗಳು ನಿಂತಿವೆ.

೧. ಅಕ್ಕಿ ಮೇಲೂ ಆಸೆ , ನಂಟರ ಮೇಲೂ ಒಲವು
೨. ಅನ್ನ ತಿಂದ ಮನೆಗೆ ಕನ್ನ ಹಾಕಬಾರದು

ಇದಲ್ಲದೆ ಹಲವು ಬಗೆಯ ಅಕ್ಕಿಗಳು ಇಲ್ಲವೆ ಅಕ್ಕಿಯ ಹಾಗೆ ಕಾಣುವ ಬೀಜ ಇಲ್ಲವೆ ದಾನ್ಯಗಳು ಇವೆ. ಕಿಟ್ಟೆಲ್ ಪದನೆರಕೆಯಿಂದ:-

ಅವಲಕ್ಕಿ = ಅವಲ್+ಅಕ್ಕಿ
ಏಲಕ್ಕಿ = ಏಲ+ಅಕ್ಕಿ, ಯಾಲಕ್ಕಿ = ಯಾಲ+ಅಕ್ಕಿ(cardamom)
ಬಿದಿರಕ್ಕಿ = ಬಿದಿರು+ಅಕ್ಕಿ
ಸಬ್ಬಕ್ಕಿ = ಸಬ್ಬ(?)+ಅಕ್ಕಿ
ಕುದಕಲಕ್ಕಿ = ಕುದಕಲ್+ಅಕ್ಕಿ, ಕುಸಲಕ್ಕಿ =ಕುಸಲ್+ಅಕ್ಕಿ
ಬೆಣತಕ್ಕಿ = ಬೆಣತ್+ಅಕ್ಕಿ = ಬೆಳತ್+ಅಕ್ಕಿ ( ಬಿಳಿ ಅಕ್ಕಿ)
ಕೇಸಕ್ಕಿ= ಕೇಸ್+ಅಕ್ಕಿ
ಜೀರಾಸಣ್ಣಕ್ಕಿ, ದಪ್ಪಕ್ಕಿ, ದೇವಮಲ್ಲಿಗೆಯಕ್ಕಿ, ದೊಡ್ಡ ಬಯ್ರ್ ಅಕ್ಕಿ, ಪುಟ್ಟರಾಜಕ್ಕಿ, ಬಗಡೆಯಕ್ಕಿ,
ನವಣೆಯಕ್ಕಿ, ಸಾಮೆಯಕ್ಕಿ, ಹಾರಕದಕ್ಕಿ

ಹಾಗಾದರೆ ’ಅಕ್ಕಿ’ ಎಂಬ ಪದದ ಗುಟ್ಟೇನು ಎಂದು ನೋಡಿದಾಗ:-

ಅರಿ+ಕೆ = ಅರಿಕೆ (ಅರಿ ಎಂಬ ಎಸಕಪದಕ್ಕೆ ’ಕೆ’ ಎಂಬ ಒಟ್ಟನ್ನು ಸೇರಿಸಿ ಅರಿಕೆ ಎಂಬ ಹೆಸರುಪದ ಮಾಡಲಾಗಿದೆ)

ಅರಿ ಎಂಬುದಕ್ಕೆ ಕನ್ನಡದಲ್ಲಿ ’ತುಂಡು ಮಾಡು’, ’ಕತ್ತರಿಸು’ ಎಂಬ ಹುರುಳಿದೆ. Ka. ಅರಿ ari (ಅರಿದ್ arid-) to cut or lop off; n. cutting off, gnawing as vermin, a handful or more of corn cut at one stroke; ಅರಿಸು arisu to cause to cut off; ಅರಿವಾಳ್ arivāḷ, ಅರುವಾಳ್ aruvāḷ sickle.ಅಂದರೆ ಕುಡುಗೋಲು [DED 212]
ಕನ್ನಡಿಗರು(ಒಟ್ಟಂದದಲ್ಲಿ ದ್ರಾವಿಡ ನುಡಿಯಾಡುವವರು) ಮೊದಮೊದಲು ಉಳುಮೆಯನ್ನು ಮಾಡಿ ಬತ್ತದ ಬೆಳೆ ತೆಗೆದು ಈ ರೀತಿ ಕತ್ತರಿಸಿ ಇಲ್ಲವೆ ’ಕಟಾವು’ ಮಾಡಿ ಮೊದಮೊದಲು ಪಡೆದ ದಾನ್ಯ ಈ ’ಅಕ್ಕಿ’ಯೇ ಇರಬೇಕು. ಹಾಗಾಗಿ ’ಅರಿಕೆ’ ಎಂಬುದು ಹೆಸರು ಪದವಾಗಿ ಅದಕ್ಕೆ ’ಕತ್ತರಿಸಿದ್ದು’ ಇಲ್ಲವೆ ’ಕಟಾವು ಮಾಡಿ ತೆಗೆದದ್ದು’ ಹುರುಳಿದೆ. ಕನ್ನಡ ನುಡಿ ಹಿನ್ನಡವಳಿಯನ್ನು ಗಮನಿಸಿದಾಗ ’ರ್’ ಕಾರದ ಮುಂದೆ ಯಾವುದೇ ಮುಚ್ಚುಲಿಯು ಬಂದಾಗ ಈ ’ರ್’ ಕಾರವು ಬಿದ್ದು ಹೋಗಿ ಅದರ ಮುಂದಿನ ಮುಚ್ಚುಲಿಯು ಇಮ್ಮಡಿಯಾಗುತ್ತದೆ.

ಎತ್ತುಗೆಗೆ:
೧. ಸುರ್ಕು => ಸುಕ್ಕು, ಇರ್ಕು => ಇಕ್ಕು, ಉರ್ಕು => ಉಕ್ಕು, ಬೆರ್ಕು => ಬೆಕ್ಕು
೨. ಅರ್ಗಳ => ಅಗ್ಗಳ
೩. ಚುರ್ಚು => ಚುಚ್ಚು, ಮರ್ಚು=> ಮೆಚ್ಚು
೪. ಕರ್ತಲೆ => ಕತ್ತಲೆ
೫. ಉರ್ದು=> ಉದ್ದು, ಮರ್ದು => ಮದ್ದು

ಹಾಗೆಯೇ, ಅರಿಕೆ====ಮಾತಿನ ಸವೆತದಿಂದ ’ಇ’ಕಾರ ಬಿದ್ದು ಹೋಗಿ===> ಅರ್ಕೆ => ಅಕ್ಕೆ=> ಅಕ್ಕಿ

ಅಕ್ಕೆ => ಅಕ್ಕಿ ಆಗಿರುವುದು ಕನ್ನಡದ ಆಡುನುಡಿಯ ಮಟ್ಟಿಗೆ ಸಹಜವಾದುದೇ. ತೆಂಕು ಮತ್ತು ಬಡಗು ಕರ್ನಾಟಕದ ಆಡುನುಡಿಗಳಲ್ಲಿ ಬರಹಗನ್ನಡದ ಪದದ ಕೊನೆಯಲ್ಲಿರುವ ’ಎ’ಕಾರವು ’ಇ’ಕಾರಕ್ಕೆ ತಿರುಗಿದೆ.

ಎತ್ತುಗೆಗೆ :
ಮನೆ => ಮನಿ(house) - ಬಡಗು ಕರ್ನಾಟಕದಲ್ಲಿ ಮಾತ್ರ
ಬರೆ => ಬರಿ (write) - ತೆಂಕು ಮತ್ತು ಬಡಗು ಕರ್ನಾಟಕ

ಇದೆಲ್ಲಕ್ಕು ಇಂಬು ಕೊಡುವಂತೆ ನಡುವಣ ದ್ರಾವಿಡ ನುಡಿಗುಂಪಿಗೆ ಸೇರಿದ
*ಕೊಲಾಮಿ ನುಡಿಯಲ್ಲಿ Kol. ark- (arakt-) to harvest ಅಂದರೆ ಕಟಾವು/ಸುಗ್ಗಿ ಮಾಡು [DED 212]
*ನೈಕಿ(ಚಂದ) ನುಡಿಯಲ್ಲಿ Nk. (Ch.) ark- to cut paddy, harvest ಅಂದರೆ ಬತ್ತವನ್ನು ಕಡಿ ಇಲ್ಲವೆ ಸುಗ್ಗಿ ಮಾಡು [DED 212]
ನೈಕಿ ನುಡಿಯಲ್ಲಿ ನೇರವಾಗಿ ’ಬತ್ತವನ್ನು ಕಡಿ’ ಎಂಬ ಹುರುಳೇ ಇರುವುದರಿಂದ, ಮೇಲೆ ಹೇಳಿರುವ ’ಅಕ್ಕಿ’ಯ ಪದಗುಟ್ಟಿಗೆ ಇನ್ನಶ್ಟು ಆನೆಬಲವನ್ನು ಒದಗಿಸುತ್ತದೆ. ಇಂಗ್ಲಿಶಿನ ’rice' ಕೂಡ ’ಅರಿಕೆ’(ಅರಿಸಿ arici) ಯಿಂದ ಬಂದಿರಬಹುದು.