ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Wednesday, August 22, 2012

ಕಡಲು

’ದೀಪವು ನಿನ್ನದೆ .ಗಾಳಿಯು ನಿನ್ನದೆ...ಕಡಲು ನಿನ್ನದೆ, ಹಡಗು ನಿನ್ನದೆ’ ಈ ಹಾಡನ್ನು ಕೇಳದವರುಂಟೆ. ಕನ್ನಡ ನಾಡಿನ ಪಡುಕರಾವಳಿಗೆ ಬರೀ ಕಡಲೇ ಕಡಲು.

ಹಲವು ನಲ್ಸಾಲುಗಳಲ್ಲಿ ಕಡಲನ್ನು ಬಳಸಲಾಗಿದೆ. ಹಾಗಾದರೆ ಕಡಲಿಗೆ ’ಕಡಲು’ ಎನ್ನಲು ಕಾರಣವೇನು?

ಕನ್ನಡದಲ್ಲಿ ’ಕಡೆ’ ಎಂಬ ಪದಕ್ಕೆ ಈ ಹುರುಳುಗಳಿವೆ - ’Ka. kaḍe, kaḍi to churn, stir [DED1141]. ಕಡಲು(=sea) ಎಂಬುದು ಎಡೆಬಿಡದೆ ನೀರನ್ನು ಕಡೆಯಲಾಗುವ ತಾವು. ಇದಕ್ಕೆ ಹಲವು ಕಾರಣಗಳಿರಬಹುದು, ಅದು ಗಾಳಿಯೊ, ಬೂಮಿಯ ಒಳಗಿನ ಕದಲುವಿಕೆಯೊ...ಮುಂತಾದವು. ಈ ಕಡೆತದಿಂದ ಎಡೆಬಿಡದೆ ಅಲೆಗಳು ಏಳುತ್ತಿರುತ್ತವೆ. ಅಂದಮೇಲೆ ’ಕಡಲು’ ಮತ್ತು ’ಕಡೆ’ ಎಂಬ ಪದಗಳಿಗೆ ನಂಟಿರಬಹುದಲ್ಲವೆ? ಕಡಲು ’ಕಡೆ’ ಯಿಂದ ಹೀಗೆ ಬಂದಿರಬಹುದು.

ಕಡೆ+ಇಲು = ಕಡಿಲು=> ಕಡಲು (ಕಡೆದದ್ದು, ಕಡೆಯಲಾಗುತ್ತಿರುವುದು ಯಾವುದೊ ಅದೇ ಕಡಲು) => ಕಡ್ಲು Ka. kaḍal sea [DED 1118]
ಕನ್ನಡದಲ್ಲಿ ಹಲವು ಕಡೆ ಮೂರು ಬರಿಗೆಗಳ ಪದದಲ್ಲಿ ಎರಡನೇ ಉಲಿಕಂತೆಯ/ಬರಿಗೆಯಲ್ಲಿರುವ ತೆರೆಯುಲಿ(ಸ್ವರ) ನಿಕ್ಕಿಯಾಗಿರುವುದಿಲ್ಲ. ಅದು ಹಲವು ಕಡೆ ಹಲವು ತೆರೆಯುಲಿಯ ರೂಪ ತಾಳುತ್ತದೆ. ಹಲವು ಆಡುನುಡಿಗಳಲ್ಲಿ ಈ ತೆರೆಯುಲಿಯೇ ಬಿದ್ದು ಹೋಗುತ್ತದೆ. ಎತ್ತುಗೆಗೆ

೧. ಬಾಗಿಲು = ಬಾಗಲು=ಬಾಗ್ಲು ೨. ಮೆಟ್ಟಿಲು =ಮೆಟ್ಟಲು=ಮೆಟ್ಲು

ಚೊಚ್ಚಲು

   ಇದರಲ್ಲಿ ಎರಡು ತರದ ಬಳಕೆಗಳಿವೆ. ಒಂದು 'ಮೊದಲ ಬಸುರ್ತನ'ವನ್ನು ಸೂಚಿಸುವುದು. ಇನ್ನೊಂದು 'ಮೊದಲು' ಎಂಬ ಹುರುಳಶ್ಟನ್ನೇ ಕೊಡವುದು
ಬಳಕೆ:
  ೧. ಹೆರಿಗೆಗೆ ಬಂದಿದ್ದ ಐವರು ಚೊಚ್ಚಲು  ಹೆಂಗಸರಿಗೆ ಸೂಕ್ತ ಸೌಲಭ್ಯವಿಲ್ಲ ಎಂದು ಹೇಳಿದರು.
    ೨. ತಮ್ಮ ಚೊಚ್ಚಲು ಚಿತ್ರವನ್ನು ನಿರ್ದೇಶನ ಮಾಡಿರುವ  ಮಧುಚಂದ್ರ..
  
ಬಿಡಿಸುವಿಕೆ:
   ಚೊಚ್ + ಚೂಲ್  = ಚೊಚ್ಚೂಲ್ = ಚೊಚ್ಚಲ್= ಚೊಚ್ಚಿಲ್ = ಚೊಚ್ಲು

ಚೊಚ್ ಎಂಬುದಕ್ಕೆ 'ಮೊದಲು' ಎಂಬ ಹುರುಳಿದೆ. ತಮಿಳಿನ ತೊಲ್ (=ಹಳೆಯ) ಎಂಬ ಪದಕ್ಕೆ ನಂಟಿರುವ ಪದ ಇದು.  ಮೊದಲು ಮತ್ತು ಹಳೆಯ ಎಂಬ ಪದಗಳಿಗೆ ನಂಟಿದೆ. ನಮ್ಮ ಮೊದಲಿಗರು(ಹಿಂದಿನವರು) ನಮ್ಮ ಹಳಬರು/ಮೂಲ ನಿವಾಸಿಗಳು ಆಗುತ್ತಾರೆ.

Ka. coc-, in: coccal first  Ta. tol old, ancient[3516]

ಚೂಲ್ (ಸೂಲ್) ಎಂಬುದಕ್ಕೆ 'ಬಸುರಿಯಾಗು', ಬಸುರ್ತನ ಎಂಬ ಹುರುಳುಗಳಿವೆ.

Ka. cūl, sūl to become pregnant; n. conception, pregnancy, egg, wateriness of clouds[2733]

ಹಾಗಾಗಿ ಚ್ಚೊಚ್ಚಲು ಎಂಬುದಕ್ಕೆ 'ಮೊದಲ ಬಸುರ್ತನ' ಎಂದಾಗಿದೆ. ಆದರೂ ಬಸುರ್ತನಕ್ಕೆ ನಂಟಿರದ ಕುಳ್ಳಿಹ(ಸಂದರ್ಬ)ಗಳಲ್ಲು 'ಚೊಚ್ಚಲು' ಬಳಸುವುದುಂಟು. ಇದು ಹೀಗಿರಬಹುದು
ಚೊಚ್ಚ್+ಇಲು = ಚೊಚ್ಚಿಲು= ಚೊಚ್ಚಲು , ಇದು ಮೊದಲನೆಯದ್ದು ಎಂಬ ಅರ್ತವನ್ನಶ್ಟೇ ಕೊಡುತ್ತದೆ.
ಇದೇ ತರ ಮೆಟ್ಟ್+ ಇಲು= ಮೆಟ್ಟಿಲು
ಇಲ್ಲಿ 'ಇಲ್' ಎಂಬು ಒಂದು ಒಟ್ಟು. ಎತ್ತುಗೆಗೆ: ಮೆಟ್ಟಿಲು=ಮೆಟ್ಟಿದ್ದು=ಮೆಟ್ಟಿದ ತಾವು

Tuesday, August 21, 2012

ಅರಸ


ಅರಸ ಎಂಬ ಪದ ಹಿನ್ನಡವಳಿ ಓದಿದವರಿಗೆ ಪರಿಚಯವಿರುವೇ ಪದವೇ. ಅದರ ಬಳಕೆಗಳು ಹೀಗಿವೆ
೧. ಈ ಗುಡಿಯನ್ನು ಅರಸರ ಆಳ್ವಿಕೆಯಲ್ಲಿ ಕಟ್ಟಲಾಯಿತು
೨. ಆಳಾಗಿ ದುಡಿ. ಅರಸನಂತೆ ಉಣ್ಣು ( ನಾಣ್ಣುಡಿ)
೩. ಮಯ್ಸೂರಿನ ಒಡೆಯರದೇ ಕನ್ನಡದ ಕೊನೆಯ ಅರಸು ಮನೆತನ. .
ಅರಸ ಎಂಬ ಪದಕ್ಕೆ ’ರಾಜ’, ದೊರೆ , ಒಡೆಯ ಎಂಬ ಹುರುಳುಗಳಿವೆ. Ka. arasa (in cpds. ara-), arasu king, lord [DED 201]
ಕನ್ನಡದಲ್ಲಿ ’ಚ’ ಎಂಬ ಒಟ್ಟನ್ನು ಬಳಸಿ ಗಂಗುರುತು( ಪುಲ್ಲಿಂಗ) ಪದಗಳನ್ನು ಮಾಡಬಹುದು...ಎತ್ತುಗೆಗೆ
ಬಲ +ಚ = ಬಲಚ
ಎಡ +ಚ = ಎಡಚ
ಕೋ+ಚ = ಕ್ವಾಚ ( ವಕ್ರಬುದ್ದಿಯುಳ್ಳವನು)
ಕೆಂ+ಚ = ಕೆಂಚ
ಈಗ ’ಅರ’ ಎಂಬ ಪದಕ್ಕೆ ಕನ್ನಡದಲ್ಲಿ ನೀತಿ, ದರ್ಮ, ದಾನ, ಕಟ್ಟಲೆ ಎಂಬ ಹುರುಳುಗಳಿವೆ. Ka. aṟa, aṟu virtue, charity, alms, law, dharma [DED 311]
ಇದಕ್ಕೆ ’ಚ’ ಎಂಬ ಒಟ್ಟನ್ನು ಸೇರಿಸಿದರೆ ಅರ+ಚ => ಅರಚ ಆಗುತ್ತದೆ.
ಆದರೆ ಕನ್ನಡದ ಉಲಿಕೆಯಲ್ಲಿ ’ಚ’ ಮತ್ತು ’ಸ’ ಉಲಿಪುಗಳನ್ನು ಒಂದಕ್ಕೊಂದರ ಬದಲಾಗಿ ಹುರುಳು ಕೆಡದೆ ಬಳಸಬಹುದು ಎತ್ತುಗೆಗೆ: ಚಂದ(=ಸಂದ), ಚಳಿ(=ಸಳಿ),
ಹಾಗಾಗಿ, ಅರಚ => ಅರಸ
ಒಬ್ಬ ಒಳ್ಳೆಯ ರಾಜನಾದವನು ನೀತಿವಂತ, ದರ್ಮಪರ, ದಾನಿಯಾಗಿರುವುದಲ್ಲದೆ ನಾಡಿನ ಒಳಿತಿಗಾಗಿ ಕಟ್ಟಲೆಗಳನ್ನು ಮಾಡಬೇಕಾಗುತ್ತದೆ. ಹಾಗಾಗಿ ’ಅರಸ’ ಎಂಬ ಪದ ಈ ಎಲ್ಲ ಹುರುಳುಗಳನ್ನು ಒಳಗೊಂಡಿದೆ.

Monday, August 20, 2012

ಬೆನ್ನು

  ಬೆನ್ನು ಎಂಬ ಪದ ನಾವು ದಿನಾಲು ಬಳಸುವ ಪದವಾದರೂ ಅದರ ಒಳಹೊಕ್ಕಿ ಅದರ ಹಿನ್ನೆಲೆ ಏನು ಅಂತ ನಾವು ನೋಡಿರುವುದಿಲ್ಲ.
ಬಳಕೆ:
      ೧. ಬೆನ್ನು ತುಂಬ ನೋಯುತ್ತಿದೆ
      ೨. ಅವರು ಬೆನ್ನು ಮೂಳೆ ಮುರಿದು ಹೋಗುವ ಹಾಗೆ ಹೊಡೆದರು
      ೩.  ಬೆನ್ನುಹುರಿ ಸಮಸ್ಯೆ ಇವರ ಮತ್ತು ಕುಟುಂಬದ ನೆಮ್ಮದಿಯನ್ನೇ ಕಿತ್ತುಕೊಂಡಿದೆ
ಬೆನ್ನು ಅಂದರೆ ದಿಟವಾಗಲು ಮಯ್ಯಿನ ಹಿಂಬಾಗ. ಈ 'ಹಿಂ' ಇಂದಾನೆ 'ಬೆನ್ನು' ಎಂಬ ಪದ ಬಂದಿರುವುದು.
ಪಿನ್ ಪೆರ ಎಂಬ ಪದಬೇರುಗಳಿಗೆ ಈ ಹುರುಳುಗಳಿವೆ.

Ka. pin, pim, him state of being behind,  peṟa hind part, backwards [DED 4205]

ಇಲ್ಲಿರುವ ಪಿನ್ ಮತ್ತು ಪೆರ ಎಂಬ ಪದಗಳನ್ನು ಗಮನಿಸಿದರೆ ಪ್+ಇ ಮತ್ತು ಪ್+ಎ ಎಂಬ ಎರಡು ಉಲಿಕಂತೆಗಳನ್ನು ಒಂದಕ್ಕೊಂದರ ಬದಲಾಗಿ ಬಳಸಿದರೂ ಹುರುಳಿನಲ್ಲಿ ಅಂತ ವೆತ್ಯಾಸವೇನಾಗಿಲ್ಲ ಎಂಬುದು ತಿಳಿಯುತ್ತದೆ.
ಹಾಗಾಗಿ,
   ಪೆನ್(ಹಳೆಗನ್ನಡದ ಪದ) ---ಕೊರಲಿಸದ ಉಲಿ ಕೊರಲಿಸಿದ ಉಲಿಗೆ ಮಾರ್ಪಾದಾಗ--- ಬೆನ್ ಎಂದಾಗುತ್ತದೆ.
Ka. ben, bennu, bem the back [DED 5488]

ಹೊಸಗನ್ನಡದ ಬರಹಗಳಲ್ಲಿ ಬೆನ್ ಎಂಬುದು 'ಬೆನ್ನು' ಎಂದಾಗಿದೆ.

ಕೊಸರು:-
ಕೊರಲಿಸದ ಉಲಿಗಳು: ಕ, ಚ, ಟ, ತ, ಪ
ಕೊರಲಿಸಿದ ಉಲಿಗಳು: ಗ, ಜ, ಡ, ದ, ಬ

ಪೊಂಗಲು


ಸಂಕ್ರಾಂತಿ  ಅಂದರೆ ಪೊಂಗಲು, ಪೊಂಗಲು ಅಂದ್ರೆ ಸಂಕ್ರಾಂತಿ. ಕಾರ ಪೊಂಗಲು ಮತ್ತು ಸಿಹಿ ಪೊಂಗಲು -ಎರಡೂ ನಾಲಿಗೆಗೆ ಅಚ್ಚುಮೆಚ್ಚು. ಹಾಗಾದರೆ ಪೊಂಗಲಿಗೆ ಹಾಗೆ ಹೇಳಲು ಕಾರಣವೇನು?

ಇದು ಕನ್ನಡದ್ದೇ ಆದ ಪದ. ಅದನ್ನು ಹೀಗೆ ಬಿಡಿಸಬಹುದು

ಪೊಂಗು+ಇಲು = ಹಿಗ್ಗಿದ ವಸ್ತು(ಹಿಗ್ಗಿದ್ದು), ಕುದಿದ ವಸ್ತು(ಕುದಿದ್ದು), ಅರಳಿದ ವಸ್ತು(ಅರಳಿದ್ದು)
poṅgu to boil over, burst open, expand, open, blossom, swell, be elated, exult, be overjoyed (DED 4469)

ಪೊಂಗಲು ಮಾಡುವುದಕ್ಕೆ ಬಳಸುವ ಬೇಳೆ ಮತ್ತು ಅಕ್ಕಿಯನ್ನು ನೀರಿನಲ್ಲಿ ಕುದಿಸಲಾಗುತ್ತದೆ. ಹೀಗೆ ಮಾಡುವುದರಿಂದ ಅಕ್ಕಿ ಮತ್ತು ಬೇಳೆ ಊದಿಕೊಳ್ಳುತ್ತವೆ(expand,swell). ಬೇರೆ ಮಾತಿನಲ್ಲಿ ಹೇಳಬೇಕೆಂದರೆ ಅಕ್ಕಿ/ಬೇಳೆ ಅರಳುತ್ತದೆ. ಹಾಗಾಗಿಯೇ ಇದಕ್ಕೆ ಪೊಂಗಲು ಎಂಬ ತಕ್ಕ ಹುರುಳುಳ್ಳ ಪದವನ್ನ ಕೊಡಲಾಗಿದೆ.

ಆಡುಮಾತಿನಲ್ಲಿ ಅದು ಪೊಂಗಿಲು/ಪಂಗಲು/ಪಂಗ್ಲು/ಪೊಂಗ್ಲು ಎಂದೆಲ್ಲಾ ಮಾರ್ಪಾಗಿದೆ.

Wednesday, August 15, 2012

ನೆಲುಲ್ಲು (ನೆಲ್-ಹುಲ್ಲು)


ಇದು ಒಂದು ತರದ ಹುಲ್ಲು. ಇದನ್ನು ಎತ್ತಿನ ಗಾಡಿಯ ಮೇಲೆ ಹಾಕಿ ಕೂತುಕೊಳ್ಳಲು ಮೆತ್ತೆಯನ್ನು ಮಾಡಲಾಗುತ್ತದೆ. ಅಲ್ಲದೆ ಇದನ್ನು ಮೇವಿಗೆ ಬಳಸಲು ಹಳ್ಳಿಗಳಲ್ಲಿ ಮೆದೆ ಮಾಡಿಡಲಾಗುತ್ತದೆ.
ಬಿಡಿಸಿಕೆ:-
ನೆಲ್+ಹುಲ್ಲು = ನೆಲ್-ಹುಲ್ಲು =>(ಹ ಕಾರದ ಬೀಳುವಿಕೆಯಿಂದ) ನೆಲುಲ್ಲು
ಬಳಕೆ:-
ಇಲ್ಲಿ ನೆಲುಲ್ಲು ಆಸ್ಬುಡಂವ್, ಒಳ್ಳಿ ಮೆತ್ಗಿರುತ್ತೆ. (ಇಲ್ಲಿ ನೆಲುಲ್ಲನ್ನು ಹಾಸಿ ಬಿಡುವ, ಒಳ್ಳೆ ಮೆತ್ತಗೆ ಇರುತ್ತೆ)
ನೆಲ್ ಅಂದರೆ ಬತ್ತ ಅಂತ ಹುರುಳಿದೆ.Ka. nel, nellu paddy, rice in its husk, rice as growing, a grain of paddy. (DED 3753)
ನೆಲುಲ್ಲು ಅಂದರೆ ಬತ್ತದ ಹುಲ್ಲು (paddy grass)

ತಳಾರೆ



ಬಿಡಿಸಿಕೆ: ತಳ್ +ಆರೆ = ತಳಾರೆ => ತಳಾರ (ಆಡುನುಡಿಯಲ್ಲಿ)
ಬಳಕೆ: ತಳಾರ್ದಲ್ ನಡಿ. ಕಲ್ಲುಮುಳ್ಳಿನ್ ದಾರಿ
ತಳ್ ಎಂಬುದು ’ತಾಳ್’ ಎಂಬುದರ ತೆಂಕಿನ ಒಳನುಡಿಯ ರೂಪ. ತಾಳ್ ಎಂಬುದಕ್ಕೆ Ka. tāḷ, tāḷu (tāḷd-) to hold, take, assume, get, obtain, receive, have or possess, undergo, experience, suffer patiently or quietly, be patient, endure, wait, last, continue unimpaired, wear well, bear with ( DED 3188)
ಇದರಲ್ಲಿರುವ ’wait' ಎಂಬ ಅರ್ತ ಹೆಚ್ಚು ಹೊಂದಿಕೆಯಾಗುತ್ತದೆ. ’ಆರೆ’ ಎಂಬ ಒಟ್ಟು ಒತ್ತಿ ಹೇಳುವುದಕ್ಕೆ ಬಳಸಲಾಗುತ್ತದೆ.
ಎತ್ತುಗೆ: ಕಣ್ಣಾರೆ, ಕಯ್ಯಾರೆ, ಹೊತ್ತಾರೆ
ಹಾಗಾಗಿ ತಳಾರೆ ಎಂಬುದಕ್ಕೆ ’ನಿದಾನ’, ಮೆಲ್ಲಗೆ, slowly ಎಂಬ ಅರ್ತ ಇದೆ. ತಾಳು ಎಂಬುದನ್ನು ಒತ್ತಿ ಹೇಳುವುದಕ್ಕೆ ’ಆರೆ’
ಎಂಬ ಒಟ್ಟನ್ನು ಸೇರಿಸಲಾಗಿದೆ.