ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Friday, August 31, 2012

ದೋಸೆ

ದೋಸೆ ಎಂದೊಡನೆ ಬಾಯಲ್ಲಿ ನೀರೂರುವುದರೊಂದಿಗೆ ಕೆಲವು ಗಾದೆಗಳು ನೆನಪಿಗೆ ಬರುತ್ತವೆ.
೧. ಎಲ್ಲರ ಮನೆ ದೋಸೆನೂ ತೂತೆ
೨. ಎಲ್ಲರ್ ಮನೆ ದೋಸೆ ತೂತಾದರೆ ನಮ್ಮನೆ ಕಾವಲಿನೇ ತೂತು.

ಹಾಗಾದರೆ ತೂತಿಗೂ , ದೋಸೆ ನಂಟಿರಬಹುದೆಂದು ಉಂಕಿಸಿದಾಗ ...

ತೂತು
Ka. tūtu, tūntu hole;[DED 3399(b)]
ದೊಗೆ, ಡೊಗೆ Ka. ḍoge, doge to make a hole with the hand [DED 2990]
ಡೊಗರು, ಡೋರು, ದೊಗರು, ದೋರುKa. ḍogaṟu, ḍōṟu, dogaṟu, dōṟu hollow, hole in a wall, in a tree, in the ground [ DED 2990]
ತುರುವು Ka. turi, turuvu to hollow, bore, drill, make a hole [ DED 3339]
ತೋಡುKa. tōḍu dig, excavate a hole [DED 3549]
ತೊಳೆ Ka. toḷe hole, bored hole [ DED 3528]

ಒಟ್ಟಿನಲ್ಲಿ ತು, ತೋ, ದೊ, ದೋ ಎಂಬ ಉಲಿಕಂತೆಗಳಿಂದ ಸುರುವಾಗುವ ಹಲವು ಪದಗಳು ತೂತು, ರಂದ್ರ ಇಲ್ಲವೆ ಹೋಲ್ ಎಂಬ ಹುರುಳನ್ನು ಕೊಡುತ್ತದೆ.
ಇದಲ್ಲದೆ ಕನ್ನಡದಲ್ಲಿ ’ಚೆ’ ಎಂಬ ಒಟ್ಟಿನಿಂದಾದ ಹಲವು ಹೆಸರುಪದಗಳು ಸಿಗುತ್ತವೆ.
ಎತ್ತುಗೆಗೆ: ಅಂಚೆ, ಬೆಂಚೆ( ಸಣ್ಣ ಕೊಳ), ಕಚ್-ಚೆ, ಮಿಡಿಚೆ.

ಇನ್ನು, ’ಸೆ’ ಇಂದ ಕೊನೆಯಾಗುವ ಹಲವು ಹೆಸರು ಪದಗಳಿವೆ
ಎತ್ತುಗೆಗೆ: ಅಗಸೆ, ಬೊಗಸೆ, ವಲಸೆ, ವರಸೆ


ಹಾಗಾಗಿ, ದೋ+ಚೆ = ದೋಚೆ ಇಲ್ಲವೆ ದೋ+ಸೆ = ದೋಸೆ ಎಂದು ಆಗಿರಬಹುದು. ಅಂದರೆ ’ಹಲವು ತೂತುಗಳನ್ನು ಒಳಗೊಂಡ ತಿನಿಸೇ ದೋಸೆ’ ಎಂದು ಹೇಳಲಡ್ಡಿಯಿಲ್ಲ. Ka. dōse a holed, i.e. spongy, cake of rice-flour, uddu, etc., baked on a potsherd or iron plate [DED - 3542]
ಅಲ್ಲದೆ, ಕಿಟ್ಟೆಲ್ ಅವರ ಪದನೆರಕೆಯಲ್ಲಿ ತೂತಪ್ಪಚ್ಚಿ(ತೂತು+ಅಪ್ಪಚ್ಚಿ)= A rice cake with whole ಎಂದು ಕೊಡಲಾಗಿದೆ

Wednesday, August 29, 2012

ಸಲ್ಮೊರೆ

ಮಯ್ಸೂರು, ಮಂಡ್ಯ ಮತ್ತು ಚಾಮರಾಜನಗರದ ಕಡೆ ಈ ಪದ ಬಳಕೆಯಲ್ಲಿದೆ. ಹಿಂದಿನಿಂದಲೂ, ಹೆಣ್ಣು ಇಲ್ಲವೆ ಗಂಡು ಮದುವೆಯಾಗುವಾಗ ಈಗಿರುವ ನಂಟಿನ ಒಳಗೆ ಅಂದರೆ ಸೋದರ ಮಾವನನ್ನೊ ಇಲ್ಲವೆ ಸೋದರಮಾವನ/ಸೋದರತ್ತೆ ಮಗನನ್ನೊ ಮದುಯಾಗುವುದುಂಟು. ಇದಕ್ಕೆ ’ಸಲ್ಮೊರೆ ಸರಿಯಾಗಿದೆ’ ಅಂತ ಹೇಳ್ತಾರೆ ಅಂದರೆ ಅವರಲ್ಲಿ ಅಣ್ಣ-ತಂಗಿಯ ಸಂಬಂಧವಿಲ್ಲ ಗಂಡ-ಹೆಂಡಿರಾಗಬಹುದು ಅಂತ ಅರ್ಥ. ಆದರೆ ಹೆಣ್ಣಿಗೆ/ಗಂಡಿಗೆ ದೂರದ ನಂಟಿನ ಕಡೆಯುವರ ಜೊತೆ ಮದುವೆಯಾಗುವ ಕುಳ್ಳಿಹ(ಸಂದರ್ಬ) ಒದಗಿ ಬಂದಾಗ ಇದು ಗೋಜಲಾಗುವುದರಿಂದ ಇದನ್ನ ದೊಡ್ಡವರು ಸರಿಯಾಗಿ ಹೊಂದಿಸಿ/ಲೆಕ್ಕಚಾರ ನೋಡಿ ಆಮೇಲೆ ’ಸಲ್ಮೊರೆ’ ಸರಿಯಾಗಿದಿಯೊ ಇಲ್ಲವೊ ಅಂತ ಹೇಳ್ತಾರೆ.

ಬಿಡಿಸುವಿಕೆ:
ಸಲ್ಮೊಱೆ = ಸಲ್+ಮೊಱೆ = ಸಲ್ಮೊರೆ

ಸಲ್ಲುವ ’ಮೊಱೆ’ಯೇ ಸಲ್ಮೊಱೆ. ಅಂದರೆ ’ಸಲ್ಲುವ ನಂಟು’/ಸಲ್ಲುವ ಸಂಬಂದ/ಒಪ್ಪತಕ್ಕ ಸಂಬಂದ ಅಂತ ಹುರುಳು ಬರುತ್ತದೆ.
Ka. sal (sand-) to enter, engage in, associate oneself to, agree to, accrue, arise, enter upon a course, pass, be current, be in use, pass by general consent, be valid, proper or fit, become agreeable [DED 2781 ]
Ka. moṟe a turn, time, (K.2) propriety, virtue; relationship; (Hav.) mare relationship
[DED 5015 ]

ಬಳಕೆಗಳು:-
೧. ಅವನು ಮೊಱೆಯಲ್ಲಿ ನನಗೆ ಮೊಮ್ಮಗನಾದರೂ ನನಗಿಂತ ಹೆಚ್ಚು ಬುದ್ದಿವಂತ.
೨. ನಮ್ಮ ಮೊಱೆಯವರಲ್ಲೇ ನಮ್ಮನ್ನು ಕಂಡರೆ ಹೆಚ್ಚು ಹೊಟ್ಟೆಕಿಚ್ಚು.

Tuesday, August 28, 2012

ಗೆದ್ದಲು

ನಾವು ಮರದಿಂದ ಮಾಡಿದ ಇರ್ಕೆ( ವಸ್ತು) ಗಳನ್ನು ಕೊಳ್ಳುವಾಗ ’ಕುಟ್ಟು’ ಹಿಡಿಯುತ್ತದೆಯೆ? ಇಲ್ಲವೆ ಗೆದ್ದಲು ಹತ್ತಿ ಹಾಳಾಗಬಹುದೇ ಎಂದು ಕೇಳಿ ತಿಳಿದುಕೊಂಡು ತೆಗೆದುಕೊಳ್ಳುತೇವೆ. ಹಾಗಾದರೆ ಈ ಮರವನ್ನು(ಮರದಿಂದ ಮಾಡಿದ ಇರ್ಕೆಗಳನ್ನು) ಹಾಳು ಮಾಡುವ ಕೆಲಸದ ಮೇಲೆ ಗೆದ್ದಲಿಗೆ ಆ ಹೆಸರು ಬಂದಿರಬಹುದೇ? ಅಹುದು. ಇಲ್ಲಿ ಕುಟ್ಟು ಅಂದರೆ ಹಾಳಗುವುದು, ಸವೆದು ಹೋಗುವುದು(diminish) ಎಂಬ ಹುರುಳು ಬರುತ್ತದೆ

 ಗೊದ್ದ, ಕೊರಲೆ  Ka. godda a kind of black ant, the bite of which is painful; ? koṟale a kind of ant - [DED 2096 ]
ಕೊರೆ ಎನ್ನುವುದಕ್ಕೆ ಈ ಹುರುಳುಗಳಿವೆ:- Ka. kore bore, excavate -  [DED 1859 ]

ಗೆದ್ದಲು Ka. gedal, gejjalu, geddali, geddalu white ant, flying white ant - [DED 1548 ]
ಕೆರೆ  Ka. kere to shave, scrape, scratch - [DED 1564]

ಹಾಗಾಗಿ,

’ಕೊರೆ’ಯಿಂದ ಕೊರಲೆ-> ಗೊದ್ದ

’ಕೆರೆ’ಯಿಂದ ಕೆರಲೆ -> ಗೆರಲು -> ಗೆರ್ದ್+ಅಲ್ => ಗೆರ್ದಲ್ => ಗೆದ್ದಲ್ => ಗೆಜ್ಜಲ್ ಇಲ್ಲಿ ಗೆರ್ದಲ್ = ಗೆದ್ದಲ್ ಅಂದರೆ ಕೆರೆದದ್ದು, ಗೆರೆದದ್ದು ಎಂಬ ಹುರುಳಿದೆ

ಕೊಸರು : ಕಿಟ್ಟೆಲ್ ಅವರು ಕೂಡ ’ಗೆದ್ದಲು’ ಎಂಬುದನ್ನು ’ಕೊರಲೆ’ಗೆ ನಂಟಿಸಿದ್ದಾರೆ.

Monday, August 27, 2012

ರಾಗಿ

ರಾಗಿ ಮೊದ್ದೆ ಉಪ್ಪೆಸರಿನ ಸಾರು ಎಂದರೆ ಬಾಯಲ್ಲಿ ನೀರೂರುತ್ತದೆ. ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ ಇನ್ನೊಂದು ತರ ಕಿಕ್ ಕೊಡುತ್ತೆ. ರಾಗಿ ಹುರಿಟ್ಟು ಬಾಯನ್ನು ಸಿಹಿ ಮಾಡುತ್ತೆ. ಇನ್ನು 'ರಾಗಿ ಸರಿ' ಚಿಕ್ಕಮಕ್ಕಳಿಗೆ ಬಲು ತಿನ್ನಲು ಚೆನ್ನ. ಹಾಗಾದರೆ ರಾಗಿ ಎನ್ನುವುದು ಹೇಗೆ ಬಂತು. ಅಲ್ಲದೆ ವಿಕಿಪಿಡಿಯಾದಲ್ಲಿ ಕರ್ನಾಟಕವೇ ಹೆಚ್ಚು ರಾಗಿ ಬೆಳೆಯುವ ರಾಜ್ಯ ಎಂದು ಹೇಳಲಾಗಿದೆ. ಅಂದ ಮೇಲೆ ನಮ್ಮ ರಾಗಿಯ ನಂಟು ಆಳದ್ದೆ ಇರಬೇಕು. ಅಂದರೆ ರಾಗಿಗೆ ಕನ್ನಡದ್ದೇ ಆದ ಪದವುಟ್ಟನ್ನು ಹೇಳಬಹುದೆಂದು ನೋಡಿದಾಗ...

ಬಿಡಿಸುವಿಕೆ: 
  ಇರ್+ ಅಕ್ಕಿ = ಇರಕ್ಕಿ ( metathesis ಆದ ಮೇಲೆ) => ರಾಕಿ
  ರಾಕಿ == ಕೊರಲಿಸಿದ ಇಂದ ಕೊರಲಿಸಿದಕ್ಕೆ ಮಾರ್ಪಾಟದ ಮೇಲೆ ==> ರಾಗಿ  ಆಗುತ್ತದೆ.

ಹಾಗಾದರೆ ಮುಂಪದವಾದ 'ಇರ್' ಅಂದರೇನು ಅನ್ನುವುದಕ್ಕೆ ಮುಂಚೆ ಈ ಪದಗಳನ್ನು ನೋಡೋಣ:-
೧. ಇರುಳು (ರಾತ್ರಿ, night which signifies darkness) - DED 2552 
೨. ಇರುಂಪು=ಇರುವೆ=ಎರ=ಎರುಗು (black ant)       - DED   864
೩. ಇರ್ಪಡಿ= ಇಬ್ಬಡಿ ( ಬೀಟೆ, blackwood)               - DED   483
೪. ಇರುಮೆ=ಇರುಮಯ್=ಇರ್ಮೆ=ಎರ್ಮೆ=ಎಮ್ಮೆ( ಕಪ್ಪುತನ blackness=> female buffalo)- DED 816
ಇಲ್ಲಿ ಇರ್ಮೆ ಎಂಬ ಪದ ಪದನೆರಕೆಯಲ್ಲಿ ಸಿಗದಿದ್ದರು ಕನ್ನಡದ ಉಲಿಕೆಯ ಮಟ್ಟಿಗೆ  ಇ<->ಎ ಬದಲಾಗುವುದು ಕಾಣುತ್ತದೆ.  ಎತ್ತುಗೆಗೆ: ಎದಿರ್<->ಇದಿರ್.

ಈಗಾಗಲೆ ನಮಗೆ ಗೊತ್ತಿರುವ ಹಾಗೆ ಸಾಮಾನ್ಯವಾಗಿ ಅಕ್ಕಿ ಬೆಳ್ಳಗೆ/ಬಿಳಿಯಾಗಿ ಇರುತ್ತದೆ. ಕೆಲವು ಬಗೆಯ ಅಕ್ಕಿ ಕೆಂಪಗೆ ಇದ್ದರೆ ಅದನ್ನ 'ಕೆಂಪಕ್ಕಿ' ಅನ್ನುತ್ತಾರೆ. ಬರೀ ಅಕ್ಕಿ ಅನ್ನುವುದಿಲ್ಲ. ಬಿಳಿ ಬಣ್ಣವನ್ನು ತಿಳಿಬಣ್ಣ(light colour) ಎಂದು ಬಗೆಯಲಾಗುತ್ತೆ. ಅದಕ್ಕೆ ಇದಿರಾಗಿ ಹೇಳಬೇಕಾದಾಗ ಅಂದರೆ ಕಡುಬಣ್ಣ(dark colour) ಎಂದು ಬಳಸಲಾಗುತ್ತದೆ. ಮೇಲೆ ತಿಳಿಸಿದಂತೆ dark/black/ಕಪ್ಪು ಎನ್ನುವುದಕ್ಕೆ 'ಇರ್' ಎಂಬ ಪದ ಬಳಕೆಯಲ್ಲಿದೆ. ಹಾಗಾಗಿ ರಾಗಿ ಎನ್ನುವುದಕ್ಕೆ ಕಪ್ಪಕ್ಕಿ/ಇರಕ್ಕಿ/dark rice ಎಂಬ ಹುರುಳಿದೆ ಎಂದು ಹೇಳಬಹುದು.

ಕೊಸರು : 'ಮೆಟತೀಸಿಸ್' ಎಂದರೆ ಪದಗಳಲ್ಲಿನ ಬರಿಗೆಗಳು/ಉಲಿಕಂತೆಗಳು ತಮ್ಮ ತಾವನ್ನು/ಜಾಗವನ್ನು ಹುರುಳಿನ ವೆತ್ಯಾಸವಾಗದೆ ಬದಲಾಯಿಸುತ್ತವೆ. ಹಾಗೆ ಬದಲಾದಾಗ ಉಲಿಕಂತೆಗಳಲ್ಲಿ ಮಾರ್ಪಾಡಾಗುತ್ತದೆ.
ಎತ್ತುಗೆಗೆ,
      ಇರುಳು(ಕನ್ನಡ) => ರೇಯಿ (ತೆಲುಗು) = night

Saturday, August 25, 2012

ಅಡಿಕೆ

ಬಾರತದಲ್ಲೆ ಅಡಿಕೆ ಹೆಚ್ಚು ಬೆಳೆಯುವುದು ನಮ್ಮ ಶಿವಮೊಗ್ಗ ಜೆಲ್ಲೆಯಲ್ಲಿ. ಅಂದರೆ ಅಡಿಕೆ ಎಂಬುದು ಕನ್ನಡ ನಡವಳಿಯಲ್ಲಿ ಹಾಸುಹೊಕ್ಕಾಗಿದೆ. ಇಶ್ಟು ನಮ್ಮ ನಡವಳಿಯಲ್ಲಿ ಬೆಸೆದುಕೊಂಡಿರುವ ಅಡಿಕೆಗೆ ಹೇಗೆ ಆ ಹೆಸರು ಬಂತು ಎಂಬುದನ್ನು ನೋಡೋಣ.

ಬಳಕೆಗಳು:-
೧. ಅಡಿಕೆಗೆ ಹೋದ ಮಾನೆ ಆನೆ ಕೊಟ್ಟರು ಬಾರದು
೨. ಅಡಿಕೆ ಉಡಿಯಲ್ಲಿ ಹಾಕ ಬಹುದು, ಮರವಾದ ಮೇಲೆ ಕೂಡದು
೩. ಮೊದಲು ಎಲ್ಲರ ಬಳಿಯೂ ಇರುತ್ತಿದ್ದ ಎಲೆ ಅಡಿಕೆ ಚೀಲ ನಿದಾನವಾಗಿ ಕಣ್ಮರೆಯಾಗುತ್ತಿದೆ
೪. ರಾಜ್ಯದ ಅಡಿಕೆ ಬೆಳೆಗಾರರು ಈಗ ಪ್ರತಿಬಟನೆಯ ಹಾದಿ ಹಿಡಿದಿದ್ದಾರೆ

ಬಿಡಿಸುವಿಕೆ:-
ಅಡಗು+ಕಾಯ್ = ಅಡಕ್ಕಾಯ್ = ಅಡಕೆ

ಅಡಕೆ ಎಂಬುದಕ್ಕೆ ಈ ಹುರುಳುಗಳನ್ನು ಕೊಡಲಾಗಿದೆ. Ka. aḍake, aḍa, aḍike areca, areca palm, Areca catechu Lin., and its nut; aḍakottu, aḍagatti, aḍagartti scissors for cutting areca-nut.

ಅಡಗು ಎಂಬುದಕ್ಕೆ ಅವಿತುಕೊಳ್ಳು, ಮರೆಯಾಗಿರುವುದು ಎಂಬ ಹುರುಳುಗಳಿವೆ. Ka. aḍaṅgu, aḍagu to hide, be concealed, disappear, be contained in [DED63]
ಕಾಯ್ ಎಂಬುದಕ್ಕೆ ಹಣ್ಣಾಗದಿರುವುದು ಎಂಬ ಹುರುಳಿದೆ. Ka. kāy (kāyt-, kāt-) fruit to grow or develop; kāy, kāya, kāyi, kāyu fruit in a yet unripe, but pretty full-grown state, nut, pod [DED1459]

ಹಾಗಾದರೆ ಅಡಗಿರುವ ಕಾಯಿಯೇ ಅಡಗುಕಾಯಿ=ಅಡಕ್ಕಾಯಿ => ಅಡಕೆ=> ಅಡಿಕೆ=> ಅಡ್ಕೆ ಎಂದು ಹೇಳಬಹುದು. ಅಡಿಕೆಯ ಹೊರ ಕರಟವನ್ನು ತಿನ್ನಲಾಗುವುದಿಲ್ಲ. ಯಾವುದೇ ತಿನಿಸುಗಳಲ್ಲಿ ಅದನ್ನು ಬಳಸುವುದಿಲ್ಲ. ಅಂದರೆ ಒಳಗೆ ಅಡಗಿರುವ ಕಾಯಿಯೇ ದಿಟವಾದ ಬಳಕೆಗೆ ಬರುವ ವಸ್ತು. ಹಾಗಾಗಿ ಇದಕ್ಕೆ ಅಡಕೆ ಎಂಬ ಹೆಸರು ಬಂದಿದೆ. ಹೀಗೆ ಈ ಪದ ಬಂದಿರುವುದು ಒಂದು ತೆರಹು(chance) ಅಶ್ಟೆ.

ಇದಲ್ಲದೆ, ಅಡರ್ ಎಂಬ ಪದಕ್ಕೆ ಹಲವು ಹುರುಳುಗಳನ್ನು ಕಿಟ್ಟೆಲ್ಲರು ಕೊಟ್ಟಿದ್ದಾರೆ.
೧. to climb, to ascend, to mount, to rise.
೨. appear in numbers, to amass [ಪುಟ ೩೨, A Kannada-English Dictionary, Rev F. Kittel, Basel Mission Books, Mangalore, 1894]

ಎಲ್ಲರಿಗೂ ಗೊತ್ತಿರುವ ಹಾಗೆ ಅಡಿಕೆ ಮರಗಳು ಅಡ್ಡಡ್ಡ ಬೆಳೆಯದೆ ಉದ್ದುದ್ದ ಎತ್ತರೆತ್ತರಕ್ಕೆ ಬೆಳೆಯುತ್ತವೆ. ಹಾಗಾಗಿ ಇವನ್ನು ಒತ್ತೊತ್ತಾಗಿ ಬೆಳೆಸಲಾಗುತ್ತದೆ. ಹಾಗಾಗಿ ಅಡಿಕೆ ತೋಟದಲ್ಲಿ ಹಲವು ಮರಗಳು ಒಮ್ಮೆಗೆ ಕಾಣಸಿಗುತ್ತವೆ. ಮೇಲಿನ ಎರಡು ಹುರುಳುಗಳಾದ ’ಏರು’ ಮತ್ತು " ಹಲವು ಎಣಿಕೆಗಳಲ್ಲಿ ಕಾಣಸಿಗು’ ಎಂಬುದರಿಂದ ಕೂಡ ಅಡಕೆ ಎಂಬುದು ಬಂದಿರಬಹುದು. ಮೇಲ ಮೇಲಕ್ಕೆ ಏರುವ ಮರ ಇಲ್ಲವೆ ಒತ್ತೊತ್ತಾಗಿ ಎಣಿಕೆಯಲ್ಲಿ ಹೆಚ್ಚು ಕಾಣಸಿಗುವ ಮರ ಎಂಬ ಹುರುಳನ್ನು ಇದು ಹೊಂದಿದೆ.

ಅಡರ್ +ಕೆ = ಅಡರ್ಕೆ => ಅಡಕ್ಕೆ => ಅಡಕೆ => ಅಡಕೆ [ಇಲ್ಲಿ ’ಕೆ’ ಎಂಬ ಒಟ್ಟನ್ನು ಅಡರ್ ಎಂಬ ಎಸಕಪದಕ್ಕೆ ಸೇರಿಸಿ ಹೆಸರುಪದವನ್ನಾಗಿ ಮಾಡಲಾಗಿದೆ]

Thursday, August 23, 2012

ಮದುವೆ

ಯಾರದೇ ಬಾಳಿನಲ್ಲಿಯೇ ಆದರೂ ಹೊಸದೊಂದು ನಂಟನ್ನು ಬೆಸೆಯುವ ಒಂದು ಗಟ್ಟವೇ ಇದರಿಂದ ಸುರುವಾಗುತ್ತದೆ ಎಂದು ಹೇಳಬಹುದು. ಹಾಗಾದರೆ ’ಮದುವೆ’ ಎನ್ನುವ ಪದದಲ್ಲಿ ಈ ’ಬೆಸೆಯುವ’/ಕೂಡುವ ಹುರುಳನ್ನು ಹುದುಗಿಸಿಟ್ಟರಬೇಕೆನೋ ನೋಡೋಣ.

ಬಳಕೆಗಳು:-
೧. ಮದುವೆಯ ದಿಬ್ಬಣ ಹೊರಟಿತು
೨. ಮದುವೆಮನೆ ಇನ್ನು ದೂರ ಇದೆ
೩. ಮದವಣಿಗ ಬರುವ ಹೊತ್ತಾಯಿತು.
೪. ಮದವಣಿಗಿತ್ತಿಯ ಬಿನ್ನಾಣ ನೋಡಿ
೫. ಮದುವೆಗೆ ಒಂದು ಒಳ್ಳೆ ಮುಹೂರ್ತ ನೋಡಿ

ಬಿಡಿಸುವಿಕೆ:-
ಬೇರಿನ ಪದವೇ ಮದ ಎಂದಿದೆ ..ಇದರಿಂದ ಮದಲ್ ಮದಿವೆ, ಮದುವೆ, ಮದವಣಿಗೆ, ಮದವಣಿಗಿತ್ತಿ, ಮದವನ(ಮಯ್ದುನ- ಗಂಡನ ತಮ್ಮ, ಹೆಂಡತಿಯ ತಮ್ಮ) ಈ ಪದಗಳು ಮೂಡಿ ಬಂದಿವೆ.
Ka. mada joining, wedding, marriage; madal, madive, maduve wedding, marriage; madaliga, madavaṇiga bridegroom; madaligitti, madavaṇigitti, madavaḷige, (K.2) madevaḷ bride; madavana man connected by marriage, husband [DED 4694]

ಕಿಟ್ಟೆಲರವರು ’ಮದ’ ಎಂಬ ಪದವೇ ’ಮಡು’ ಎಂಬುದರಿಂದ ಬಂದಿರಬಹುದೆಂಬ ಸುಳುಹು ಕೊಟ್ಟಿದ್ದಾರೆ. Ka. maḍu to put firmly together, join closely [DED 4681]

ಮಡು ಎಂಬ ಪದಕ್ಕೆ ಕಿಟ್ಟೆಲ್ಲರು ಈ ರೀತಿ ಇಂಗ್ಲಿಶಿನಲ್ಲಿ ಹುರುಳನ್ನು ಕೊಟ್ಟಿದ್ದಾರೆ.

ಪೊಡ+ಮಡು=ಪೊಡಮಡು=ಪೊಡವಡು ( ಕಯ್ಗಳನ್ನು ಜೋಡಿಸಿ ಬೊಗಸೆಯ ತರ ಮಾಡಿಕೊಂಡು ಆಮೇಲೆ ಅದನ್ನು ಹಣೆಯವರೆಗೂ ಎತ್ತಿ ಗೌರವ ತೋರಿಸುವುದು)=ತುೞಿಲ್= ಎಱಗು= ಮಣಿ= ನಮಸ್ಕಾರ

ಇದನ್ನು ಬೇಂದ್ರೆಯವರು ಕೂಡ ತಮ್ಮ ’ಗಂಗಾವತರಣ’ ಎಂಬ ಪದ್ಯದಲ್ಲಿ ಹೀಗೆ ಬಳಸಿದ್ದಾರೆ

       ಇಳಿದು ಬಾ ತಾಯಿ ಇಳಿದು ಬಾ

       ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
       ದೇವದೇವರನು ತಣಿಸಿ ಬಾ | ದಿಗ್ದಿಗಂತದಲಿ ಹನಿಸಿ ಬಾ | ಚರಾಚರಗಳಿಗೆ ಉಣಿಸಿ ಬಾ
      ಇಳಿದು ಬಾ ತಾಯಿ ಇಳಿದು ಬಾ

      ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ

ಒಟ್ಟಿನಲ್ಲಿ ’ಮದುವೆ’ಗೂ ’ನಮಸ್ಕಾರ’ಕ್ಕೂ ನಂಟಿದೆ ಎಂದು ತೋರುತ್ತದೆ. ಹಾಗಾಗಿ ಹಿರಿಯರು ಹೇಳುವ ಮಾತು ’ಎರಡು ಕಯ್ ಒಂದಾದ ಹಾಗೆ ಎರಡು ಜೀವಗಳು ಒಂದಾಗಬೇಕು’ ಅಂದರೆ ’ಮದುವೆ’ ಆಗಬೇಕು ಎಂಬುದು ಎಶ್ಟು ಹುರುಳಿರುವ ನುಡಿ ಎಂಬುದು ಇದರಿಂದ ತಿಳಿಯುತ್ತದೆ.

ನೆತ್ತರು

  ಮನುಶ್ಯನ ಬದುಕಿರುವುದಕ್ಕೆ ಮುಕ್ಯವಾಗಿ ಬೇಕಾಗಿರುವುದೇ ಇದು. ಇದರಂದನೇ ಮಯ್ಯಲ್ಲಿರುವ ಹಲವು ಸೀರುಸಿರಿಗಳಿಗೆ(cells) ಹುಳಿವುಟ್ಟುಕ(oxygen) ದೊರೆಯುತ್ತದೆ.

 ಬಳಕೆಗಳು:-
 ೧. ರಕ್ತ ಕುಡಿಯುವ ಬಾವಲಿಗಳದ್ದೂ ಒಂದು ಜಾತಿ ಇದೆ. ‘ನೆತ್ತರು ಬಾವಲಿ’ಗಳೆಂದು ಅವುಗಳ ಹೆಸರು
 ೨. ಹೆಪ್ಪುಗಟ್ಟಿದ ನೆತ್ತರು

ಬಿಡಿಸುವಿಕೆ:
ನೆಯ್ತ್+ತೋರ್(=ಸೋರ್)

ರಕ್ತವು ನೋದುವುದಕ್ಕೆ/ಮುಟ್ಟಿದರೆ 'ಎಣ್ಣೆ'ಯಂತೆಯೂ ಇಲ್ಲ 'ನೀರು'ನಂತಯೂ ಇರುವುದಿಲ್ಲ. ಈಗ ಎರಡು ಪದಗಳಾದ ನೆಯ್ ಮತ್ತು ಸೋರ್ ಎಂಬುದರ ಹುರುಳುಗಳನ್ನು ನೋಡೋಣ
ನೆಯ್ ಅಂದರೆ ತುಪ್ಪ, ಬೆಣ್ಣೆ, ಎಣ್ಣೆ ಎಂಬ ಹುರುಳುಗಳಿವೆ ( ಬೆಣ್ಣೆಯಲ್ಲಿ, ಎಣ್ಣೆಯಲ್ಲಿ ನೆಯ್ ಎಂಬ ಪದವಿದೆ)
ಇದಲ್ಲದೆ ನೆಯ್ತ್ ಎಂಬುದಕ್ಕೆ greasy ಎಂಬ ಹುರುಳು ಕನ್ನಡ ತಮಿಳು ಎರಡರಲ್ಲೂ ಇದೆ.
Ka. Ta. ney butter, ghee, oil, grease, fat, honey; (-pp-, -tt-) to be glossy, polished, be fat, plump, become greasy, unctuous, or sticky [DED 3746]

ಇನ್ನು 'ಸೋರ್' ಎಂಬುದಕ್ಕೆ 'ಹನಿ ಹನಿಯಾಗಿ ಸುರಿ' ಎಂಬ ಹುರುಳುಗಳಿವೆ. Ka. sōr to drop, drip, trickle, ooze, flow as coconut water, water-drops, juice of fruit, etc., come forth as entrails; n. leaking, dropping, etc[DED 2883]

ಹಾಗಾಗಿ ನೆತ್ತರ್ (< ನೆಯ್ತ್+ಸೋರ್) ಎಂಬುದಕ್ಕೆ ಸೋರುವ ಎಣ್ಣೆ, ಚೊಟ್ಟಿಕ್ಕುವ ಎಣ್ಣೆ ('leaking oil'/oil which drops or oozes) ಎಂಬ ಹುರುಳುಗಳು ಅದಕ್ಕೆ ಬಂದೊದಗಿದೆ.  ನೆತ್ತರನ್ನು ಒಂದು ತರದ ಎಣ್ಣೆ ಅಂದರೆ ಈ ಸೋರುವ ಪರಿಚೆ(ಗುಣ) ಹೊಂದಿರುವ ಎಣ್ಣೆ ಎಂದು ಗುರುತಿಸಿ/ಗಮನಿಸಿ ಈ ಪದವನ್ನು ಉಂಟು ಮಾಡಲಾಗಿದೆ ಎಂದು ಎನಿಸುತ್ತದೆ.