ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Tuesday, November 13, 2012

ರೇಗು

'ರೇಗು' ಎಂಬ ಪದವು ಹಲವು ನೆಲೆಗಳಲ್ಲಿ ಬಳಕೆಯಲ್ಲಿದೆ

೧. ಅವನನ್ನು ಹಾಗೆ ರೇಗಬೇಡ. 
೨. ಇವನ ಮೇಲೆ ಅವನು ರೇಗುತ್ತಿದ್ದ.

ಈ ಮೇಲಿನ ಸೊಲ್ಲುಗಳನ್ನು ಹೀಗೆ ಹೇಳಿದರೆ ಹುರುಳಿನಲ್ಲಿ ಕೊಂಚ ವ್ಯತ್ಯಾಸ ಆಗುತ್ತದೆ.
೧. ಅವನ ಮೇಲೆ ಹಾಗೆ ಎರಗಬೇಡ
೨. ಇವನ ಮೇಲೆ ಅವನು ಎರಗುತ್ತಿದ್ದ.

ಈಗ 'ಎರಗು' ಎಂಬ ಪದವನ್ನು ನೋಡೋಣ.
ಎರಗು Ka. eṟagu to bow, be bent, crouch, come down, alight, fall upon, attack, enter, join, accrue to; n. a bow, obeisance; eṟagisu to cause to bow, etc.; eṟaka coming down, etc.; eṟaguha bowing, coming down, perching, etc. [DED - 516]

ಎರಗು => ಬೇರೊಬ್ಬರ ಮಯ್ಯ ಮೇಲೆಯೇ ಎರಗಿ ಹೋಗುವುದು, ಬೇರೊಬ್ಬರ ಮೇಲೆ ಯಾವುದೇ ಕಯ್ದುಗಳಿಂದ 'ಎರಗು'ವುದು
ರೇಗು => ಮಾತಿನ ಮೂಲಕ ಬೇರೊಬ್ಬರ ಮೇಲೆ 'attack' ಮಾಡುವುದು.

'ಎರಗು' ಎಂಬುದನ್ನು 'ಉಲಿಕದಲಿಕೆ'ಗೆ(metathesis) ಒಳಪಡಿಸಿದರೆ.

ಎರಗು ===ಉಲಿಕದಲಿಕೆ ಆದಮೇಲೆ==> ರೇಗು ಆಗುತ್ತದೆ

ಯಾಕಂದರೆ,
ಕನ್ನಡದಲ್ಲಿ(ಇಲ್ಲವೆ ದ್ರಾವಿಡ ನುಡಿಗಳಲ್ಲಿ )ಉಲಿಕದಲಿಕೆಯಾದಾಗ
"ಪದದ ಮೊದಲಲ್ಲಿರುವ ತೆರೆಯುಲಿಯು ಬಿದ್ದು ಹೋಗುತ್ತದೆ. ಮತ್ತು ಅದೇ ಗುಂಪಿನ ಉದ್ದ ತೆರೆಯುಲಿ ಪದದ ಎರಡನೇ ಬರಿಗೆಗೆ ಅಂದರೆ ಮುಚ್ಚುಲಿಗೆ ಬಂದು ಸೇರಿಕೊಳ್ಳುತ್ತದೆ"

ಕನ್ನಡದಲ್ಲಿ 'ಯ' ಮತ್ತು 'ವ' ಗುಂಪು ಎಂದು ತೆರೆಯುಲಿಗಳನ್ನು ಗುಂಪಿಸಬಹುದೆಂದು ಈ ಮಿಂಬರಹದಲ್ಲಿ ತೋರಿಸಿಕೊಡಲಾಗಿದೆ. ಅದರ ಪ್ರಕಾರ :-
ಯ - ಇ, ಈ, ಎ, ಏ,
ವ - ಅ,ಆ, ಉ, ಊ, ಒ, ಓ

ಆದ್ದರಿಂದ 'ಎರಗು' ಎಂಬುವಲ್ಲಿರುವ 'ಎ' ಕಾರವು ಬಿದ್ದುಹೋಗಿ ಅದರೆ 'ಉದ್ದತೆರೆಯುಲಿಯು' ಮುಂದಿರುವ 'ರ'ಕಾರಕ್ಕೆ ಬಂದು ಸೇರಿಕೊಂಡಿದೆ.

ಎ+ರ್+ಅ+ಗ್+ಉ => _+ರ್+ಏ+ಗ್+ಉ => ರೇಗು

Tuesday, November 6, 2012

ರಟ್ಟು/ರೊಟ್ಟು

ರಟ್ಟು ಅಂದರೆ ಜಿ.ವಿ.ಅವರ ಪದನೆರಕೆಯಲ್ಲಿ ಕೊಟ್ಟಿರುವುದು

೧ ದಪ್ಪ ಬಟ್ಟೆ, ಒರಟು ಬಟ್ಟೆ
೨ ಪುಸ್ತಕಕ್ಕೆ ಹಾಕುವ ಮೇಲುಹೊದಿಕೆ
೩ ಬರೆಯು ವುದಕ್ಕೆ ಅನುಕೂಲವಾಗುವಂತೆ ಕಾಗದದ ಅಡಿಯಲ್ಲಿಟ್ಟುಕೊಳ್ಳುವ ದಪ್ಪನಾದ ಕಾಗದ, ಹಲಗೆ ಮುಂ.ವು
ರಟ್ಟು ಎಂಬುದು ದಪ್ಪನಾಗಿ, ಒರಟಾಗಿ, ಗಟ್ಟಿಯಾಗಿ ಇರುವುದು. ಹಾಗಾಗಿ 'ಒರಟು' ಎಂಬ ಪದವನ್ನು ತೆಗೆದುಕೊಳ್ಳೋಣ.
ಉರಟು, ಉರಟ, ಉರುಟ, ಉರುಟು, ಉಟ್ಟು, ಒರಟು, ಒರ್ಟು  uraṭu, uraṭa, uruṭa, ur(u)ṭu, uṭṭu, oraṭu, orṭu coarseness (of cloth, thread, hair), thickness, stoutness [ DED 649 ]

ಅದನ್ನು 'ಉಲಿಕದಲಿಕೆ'ಗೆ(metathesis) ಒಳಪಡಿಸಿದರೆ.

ಒರಟು ===ಉಲಿಕದಲಿಕೆ ಆದಮೇಲೆ==> ರೋಟು ಆಗುತ್ತದೆ

ಯಾಕಂದರೆ,
 ಕನ್ನಡದಲ್ಲಿ(ಇಲ್ಲವೆ ದ್ರಾವಿಡ ನುಡಿಗಳಲ್ಲಿ )ಉಲಿಕದಲಿಕೆಯಾದಾಗ
   "ಪದದ ಮೊದಲಲ್ಲಿರುವ ತೆರೆಯುಲಿಯು ಬಿದ್ದು ಹೋಗುತ್ತದೆ. ಮತ್ತು  ಅದೇ ಗುಂಪಿನ ಉದ್ದ ತೆರೆಯುಲಿ ಪದದ ಎರಡನೇ ಬರಿಗೆಗೆ ಅಂದರೆ ಮುಚ್ಚುಲಿಗೆ ಬಂದು ಸೇರಿಕೊಳ್ಳುತ್ತದೆ"

ಕನ್ನಡದಲ್ಲಿ 'ಯ' ಮತ್ತು 'ವ' ಗುಂಪು ಎಂದು ತೆರೆಯುಲಿಗಳನ್ನು ಗುಂಪಿಸಬಹುದೆಂದು ಈ ಮಿಂಬರಹದಲ್ಲಿ ತೋರಿಸಿಕೊಡಲಾಗಿದೆ. ಅದರ ಪ್ರಕಾರ :-
ಯ - ಇ, ಈ, ಎ, ಏ,
ವ - ಅ,ಆ, ಉ, ಊ, ಒ, ಓ

ಆದ್ದರಿಂದ 'ಒರಟು' ಎಂಬುವಲ್ಲಿರುವ 'ಒ' ಕಾರವು ಬಿದ್ದುಹೋಗಿ ಅದರೆ 'ಉದ್ದತೆರೆಯುಲಿಯು' ಮುಂದಿರುವ 'ರ'ಕಾರಕ್ಕೆ ಬಂದು ಸೇರಿಕೊಂಡಿದೆ.

ಒ+ರ್+ಅ+ಟ್+ಉ => _+ರ್+ಓ+ಟ್+ಉ => ರೋಟು

ಇನ್ನು ಕನ್ನಡದಲ್ಲಿ ನಾಲ್ಕು ಉಲಿಗಳ ಪದಗಳಲ್ಲಿ ಅಂದರೆ 'ಮುತೆಮುತೆ' ( ಮು=ಮುಚ್ಚುಲಿ, ತೆ=ತೆರೆಯುಲಿ) ಮಾದರಿಯ ಪದಗಳಲ್ಲಿ ಮಾರ್ಪಾಗುವಾಗ ಕೆಲವು ಒಲವುಗಳನ್ನು ಗಮನಿಸಬಹುದು
     ಮುತೆಮುತೆ <=> ಮುತೆಮುಮುತೆ    
        ತಾಟು      <=> ತಟ್ಟೆ
         ಕೇಡು      <=> ಕೆಟ್ಟು
         ನೀಳ       <=> ನಿಟ್ಟು
         ಆಡೆ        <=> ಅಟ್ಟೆ (leech)
         ಪಾಡಿ      <=> ಪಟ್ಟಿ  (village, hamlet)
         ಪಾಚಿ      <=> ಪಚ್ಚೆ

ಎಡದಲ್ಲಿ ಕೊಟ್ಟಿರುವ ಪದಗಳಲ್ಲಿ ತಾ, ಕೇ, ನೀ, ಆ, ಪಾ ಎಂಬಲ್ಲಿರುವ ಉದ್ದ ತೆರೆಯುಲಿಯು ಮರ್ಪಾಟಾದ ಮೇಲೆ ಗಿಡ್ಡವಾಗುತ್ತದೆ. ಹೀಗೆ ಗಿಡ್ದವಾಗುವುದರಿಂದ ಆಮೇಲೆ ಬರುವ ಮುಚ್ಚುಲಿ ಇಮ್ಮಡಿಯಾಗುತ್ತದೆ. ಹಾಗಾಗಿ ಮೇಲಿನ ಪದಗಳಲ್ಲಿ ಟ್ಟೆ, ಟ್ಟು, ಚ್ಚೆ ಎಂಬ ಎಂಬ ಉಲಿಕಂತೆಯನ್ನು ಗಮನಿಸಬಹುದು.
     
ಹಾಗೆಯೇ,
    ರೋಟು <=> ರೊಟ್ಟು   ಅಂತ ಆಗಿದೆ

ಕನ್ನಡ ಉಲಿಯೊಲವು 'ಒ'ಕಾರ ಮತ್ತು 'ಅ'ಕಾರವನ್ನು ಒಂದೇ ಗುಂಪಿಗೆ ('ವ' ಗುಂಪಿಗೆ) ಸೇರಿಸುವುದರಿಂದ
       ರೊಟ್ಟು => ರಟ್ಟು  ಆಗುವುದು ಸಹಜವಾಗಿದೆ.

ಇದಕ್ಕೆ ಮಿಂಬಲೆಯಲ್ಲಿ ದೊರೆತ ಬಳಕೆ ಸೊಲ್ಲುಗಳು:-
೧. ಮಿಡತೆ, ದುಂಬಿ ಇತ್ಯಾದಿ ಮನೆಯೊಳಗೆ ಬಂದರೆ ರೊಟ್ಟು (card board) ಇಂದ ಹೊಡೆದು ಹೊರಗಟ್ಟುತ್ತಿದ್ದೆವು
೨. ಪಕ್ಕಕ್ಕ ಗೌಡತಿ ಕುಂತು ಒಂದು ನೋಟಬುಕ್ ರಟ್ಟ ತಗೋಂಡು  ಗಾಳಿ ಹಾಕಕ್ಕಿ...

Tuesday, October 30, 2012

ಅಕ್ಕಿ

ಅಕ್ಕಿಯೆಂಬುದು ನಮ್ಮ ಊಟ-ತಿಂಡಿಗಳಲ್ಲಿ ಹೆಚ್ಚು ಬಳಸುವ ದಾನ್ಯ. ಎಶ್ಟೊ ಮಂದಿಗೆ ಏನು ತಿಂದರೂ ಒಂದು ತುತ್ತು ಅನ್ನ ತಿನ್ನದಿದ್ದರೆ ಮನ ತಣಿಯುವುದಿಲ್ಲ. ಅಕ್ಕಿಯ ಮತ್ತು ಅದರಿಂದ ಮಾಡುವ ’ಅನ್ನ’ದ ಮೇಲೆ ಹಲವು ಗಾದೆಮಾತುಗಳು ನಿಂತಿವೆ.

೧. ಅಕ್ಕಿ ಮೇಲೂ ಆಸೆ , ನಂಟರ ಮೇಲೂ ಒಲವು
೨. ಅನ್ನ ತಿಂದ ಮನೆಗೆ ಕನ್ನ ಹಾಕಬಾರದು

ಇದಲ್ಲದೆ ಹಲವು ಬಗೆಯ ಅಕ್ಕಿಗಳು ಇಲ್ಲವೆ ಅಕ್ಕಿಯ ಹಾಗೆ ಕಾಣುವ ಬೀಜ ಇಲ್ಲವೆ ದಾನ್ಯಗಳು ಇವೆ. ಕಿಟ್ಟೆಲ್ ಪದನೆರಕೆಯಿಂದ:-

ಅವಲಕ್ಕಿ = ಅವಲ್+ಅಕ್ಕಿ
ಏಲಕ್ಕಿ = ಏಲ+ಅಕ್ಕಿ, ಯಾಲಕ್ಕಿ = ಯಾಲ+ಅಕ್ಕಿ(cardamom)
ಬಿದಿರಕ್ಕಿ = ಬಿದಿರು+ಅಕ್ಕಿ
ಸಬ್ಬಕ್ಕಿ = ಸಬ್ಬ(?)+ಅಕ್ಕಿ
ಕುದಕಲಕ್ಕಿ = ಕುದಕಲ್+ಅಕ್ಕಿ, ಕುಸಲಕ್ಕಿ =ಕುಸಲ್+ಅಕ್ಕಿ
ಬೆಣತಕ್ಕಿ = ಬೆಣತ್+ಅಕ್ಕಿ = ಬೆಳತ್+ಅಕ್ಕಿ ( ಬಿಳಿ ಅಕ್ಕಿ)
ಕೇಸಕ್ಕಿ= ಕೇಸ್+ಅಕ್ಕಿ
ಜೀರಾಸಣ್ಣಕ್ಕಿ, ದಪ್ಪಕ್ಕಿ, ದೇವಮಲ್ಲಿಗೆಯಕ್ಕಿ, ದೊಡ್ಡ ಬಯ್ರ್ ಅಕ್ಕಿ, ಪುಟ್ಟರಾಜಕ್ಕಿ, ಬಗಡೆಯಕ್ಕಿ,
ನವಣೆಯಕ್ಕಿ, ಸಾಮೆಯಕ್ಕಿ, ಹಾರಕದಕ್ಕಿ

ಹಾಗಾದರೆ ’ಅಕ್ಕಿ’ ಎಂಬ ಪದದ ಗುಟ್ಟೇನು ಎಂದು ನೋಡಿದಾಗ:-

ಅರಿ+ಕೆ = ಅರಿಕೆ (ಅರಿ ಎಂಬ ಎಸಕಪದಕ್ಕೆ ’ಕೆ’ ಎಂಬ ಒಟ್ಟನ್ನು ಸೇರಿಸಿ ಅರಿಕೆ ಎಂಬ ಹೆಸರುಪದ ಮಾಡಲಾಗಿದೆ)

ಅರಿ ಎಂಬುದಕ್ಕೆ ಕನ್ನಡದಲ್ಲಿ ’ತುಂಡು ಮಾಡು’, ’ಕತ್ತರಿಸು’ ಎಂಬ ಹುರುಳಿದೆ. Ka. ಅರಿ ari (ಅರಿದ್ arid-) to cut or lop off; n. cutting off, gnawing as vermin, a handful or more of corn cut at one stroke; ಅರಿಸು arisu to cause to cut off; ಅರಿವಾಳ್ arivāḷ, ಅರುವಾಳ್ aruvāḷ sickle.ಅಂದರೆ ಕುಡುಗೋಲು [DED 212]
ಕನ್ನಡಿಗರು(ಒಟ್ಟಂದದಲ್ಲಿ ದ್ರಾವಿಡ ನುಡಿಯಾಡುವವರು) ಮೊದಮೊದಲು ಉಳುಮೆಯನ್ನು ಮಾಡಿ ಬತ್ತದ ಬೆಳೆ ತೆಗೆದು ಈ ರೀತಿ ಕತ್ತರಿಸಿ ಇಲ್ಲವೆ ’ಕಟಾವು’ ಮಾಡಿ ಮೊದಮೊದಲು ಪಡೆದ ದಾನ್ಯ ಈ ’ಅಕ್ಕಿ’ಯೇ ಇರಬೇಕು. ಹಾಗಾಗಿ ’ಅರಿಕೆ’ ಎಂಬುದು ಹೆಸರು ಪದವಾಗಿ ಅದಕ್ಕೆ ’ಕತ್ತರಿಸಿದ್ದು’ ಇಲ್ಲವೆ ’ಕಟಾವು ಮಾಡಿ ತೆಗೆದದ್ದು’ ಹುರುಳಿದೆ. ಕನ್ನಡ ನುಡಿ ಹಿನ್ನಡವಳಿಯನ್ನು ಗಮನಿಸಿದಾಗ ’ರ್’ ಕಾರದ ಮುಂದೆ ಯಾವುದೇ ಮುಚ್ಚುಲಿಯು ಬಂದಾಗ ಈ ’ರ್’ ಕಾರವು ಬಿದ್ದು ಹೋಗಿ ಅದರ ಮುಂದಿನ ಮುಚ್ಚುಲಿಯು ಇಮ್ಮಡಿಯಾಗುತ್ತದೆ.

ಎತ್ತುಗೆಗೆ:
೧. ಸುರ್ಕು => ಸುಕ್ಕು, ಇರ್ಕು => ಇಕ್ಕು, ಉರ್ಕು => ಉಕ್ಕು, ಬೆರ್ಕು => ಬೆಕ್ಕು
೨. ಅರ್ಗಳ => ಅಗ್ಗಳ
೩. ಚುರ್ಚು => ಚುಚ್ಚು, ಮರ್ಚು=> ಮೆಚ್ಚು
೪. ಕರ್ತಲೆ => ಕತ್ತಲೆ
೫. ಉರ್ದು=> ಉದ್ದು, ಮರ್ದು => ಮದ್ದು

ಹಾಗೆಯೇ, ಅರಿಕೆ====ಮಾತಿನ ಸವೆತದಿಂದ ’ಇ’ಕಾರ ಬಿದ್ದು ಹೋಗಿ===> ಅರ್ಕೆ => ಅಕ್ಕೆ=> ಅಕ್ಕಿ

ಅಕ್ಕೆ => ಅಕ್ಕಿ ಆಗಿರುವುದು ಕನ್ನಡದ ಆಡುನುಡಿಯ ಮಟ್ಟಿಗೆ ಸಹಜವಾದುದೇ. ತೆಂಕು ಮತ್ತು ಬಡಗು ಕರ್ನಾಟಕದ ಆಡುನುಡಿಗಳಲ್ಲಿ ಬರಹಗನ್ನಡದ ಪದದ ಕೊನೆಯಲ್ಲಿರುವ ’ಎ’ಕಾರವು ’ಇ’ಕಾರಕ್ಕೆ ತಿರುಗಿದೆ.

ಎತ್ತುಗೆಗೆ :
ಮನೆ => ಮನಿ(house) - ಬಡಗು ಕರ್ನಾಟಕದಲ್ಲಿ ಮಾತ್ರ
ಬರೆ => ಬರಿ (write) - ತೆಂಕು ಮತ್ತು ಬಡಗು ಕರ್ನಾಟಕ

ಇದೆಲ್ಲಕ್ಕು ಇಂಬು ಕೊಡುವಂತೆ ನಡುವಣ ದ್ರಾವಿಡ ನುಡಿಗುಂಪಿಗೆ ಸೇರಿದ
*ಕೊಲಾಮಿ ನುಡಿಯಲ್ಲಿ Kol. ark- (arakt-) to harvest ಅಂದರೆ ಕಟಾವು/ಸುಗ್ಗಿ ಮಾಡು [DED 212]
*ನೈಕಿ(ಚಂದ) ನುಡಿಯಲ್ಲಿ Nk. (Ch.) ark- to cut paddy, harvest ಅಂದರೆ ಬತ್ತವನ್ನು ಕಡಿ ಇಲ್ಲವೆ ಸುಗ್ಗಿ ಮಾಡು [DED 212]
ನೈಕಿ ನುಡಿಯಲ್ಲಿ ನೇರವಾಗಿ ’ಬತ್ತವನ್ನು ಕಡಿ’ ಎಂಬ ಹುರುಳೇ ಇರುವುದರಿಂದ, ಮೇಲೆ ಹೇಳಿರುವ ’ಅಕ್ಕಿ’ಯ ಪದಗುಟ್ಟಿಗೆ ಇನ್ನಶ್ಟು ಆನೆಬಲವನ್ನು ಒದಗಿಸುತ್ತದೆ. ಇಂಗ್ಲಿಶಿನ ’rice' ಕೂಡ ’ಅರಿಕೆ’(ಅರಿಸಿ arici) ಯಿಂದ ಬಂದಿರಬಹುದು.

 

Saturday, October 27, 2012

ತೊಂಬತ್ತು

ಬಿಡಿಸಿಕೆ:-
          ತೊಮ್+ಪತ್ತು = ತೊಂಬತ್ತು

ಕಿಟ್ಟೆಲ್ ಅವರ ಇಂಗ್ಲಿಶ್-ಕನ್ನಡ ಪದನೆರಕೆಯಿಂದ:-
          ತೊಮ್= previous, before (ಹಿಂದಿರುವುದು, ಮುಂಚೆಯಿರುವುದು)

ನೂರಕ್ಕೆ ಎಶ್ಟು ಮುಂಚೆಯಿರುವುದು/ಹಿಂದಿರುವುದು ತೊಂಬತ್ತು ? ಎಂಬ ಕೇಳ್ವಿ ಹಾಕಿಕೊಂಡರೆ ನೂರಕ್ಕೆ ’ಹತ್ತು’ ಹಿಂದಿರುವುದು ಯಾವುದು ಅದೇ ’ ತೊಂಬತ್ತು’ ಎಂಬ ಹುರುಳನ್ನು ಕೊಡುತ್ತದೆ Ka. tom-battu
ninety. Koḍ. tom-badï ninety. Tu. soṇpa ninety  [DED 3532]

ತಮಿಳಿನಲ್ಲಿ ಇದು ಕೊಂಚ ಬದಲಾಗಿದೆ. ’ಹತ್ತ’ರ ಬದಲು ’ನೂರು’ ಬಂದಿದೆ. ಅಂದರೆ ನೂರಕ್ಕೆ ಹಿಂದಿರುವುದೇ ’ತೊಣ್ಣೂರು’(=ninety=ತೊಂಬತ್ತು) Ta.  toṇ-ṇūṟu ninety [DED 3532]
  ಇಲ್ಲೆಲ್ಲ ’ತೊಮ್’ (ಕನ್ನಡ ಮತ್ತು ಕೊಡಗು ನುಡಿಗಳಲ್ಲಿ) ಎಂಬ ಮುನ್ನೊಟ್ಟು ಬಳಕೆಯಾಗಿದೆ. ತುಳುವಿನಲ್ಲಿ ’ಸೊಣ್’ ಆಗಿದೆ; ತಮಿಳಿನಲ್ಲಿ ’ತೊಣ್’ ಆಗಿದೆ.

Thursday, October 25, 2012

ಕಾವಲು

ಕಾವಲು ಎಂಬುದು ಮಂದಿಯಾಳ್ವಿಕೆಯ ಈ ಕಾಲದಲ್ಲಿ ಹೆಚ್ಚು ತಲೆಮೆಯನ್ನು ಪಡೆದಿರುವ ಪದ. ಈಗ ಮಂದಿಯ ಕಾವಲಿಗೆ 'ಕಾವಲು ಪಡೆ'(police force) ಇದೆ. ಮಕ್ಕಳಿಗೆ ಅವರ ತಾಯ್ತಂದೆಯರು ಕಾವಲಿದ್ದಾರೆ. ತಂಗಿಗೆ ಅಣ್ಣನ ಕಾವಲು. ಕೆಲವರಿಗೆ ಗೆಳೆಯರ ಕಾವಲು. ದೇಶದ ಗಡಿಗಳಲ್ಲಿ ಪಡೆಯ ಕಾವಲು.  ಹಳ್ಳಿಗಳಲ್ಲಿ ದನ, ಎಮ್ಮೆ, ಕುರಿಗಳನ್ನು 'ಕಾಯು'ವುದು - ಹೀಗೆ ಈ 'ಕಾವಲು' ಹಲವು ನೆಲೆಗಳಲ್ಲಿ ಹರಡಿಕೊಂಡಿದೆ.

ಕಾ kā (kād-), ಕಾಯ್ kāy (kād-/kāyd-), ಕಾಯಿ kāyi (kāyid-) to guard, protect, keep, save, tend, watch, keep in check;
ಕಾಯು kāyu (kād-) id., to wait; kāyisu to make guard, watch;
ಕಾಪು, ಕಾಹು kāpu, kāhu guarding, protecting, preserving, that which preserves;
ಕಾಪಾಡು kāpāḍu to guard, take care of;
ಕಾಯಿ, ಕಾಹಿ kāyi, kāhi person who tends, watches, guards;
ಕಾಯಿಕೆ kāyike guarding, etc.;
ಕಾವಲ್, ಕಾವಲ, ಕಾವಲಿ, ಕಾವಲು kāval, kāvala, kāvali, kāvalu guarding, protecting, watching, a guard, custody, place where anything is guarded [DED 1416]

ಆದರೆ ಯಾವುದೇ ವಸ್ತು ಇಲ್ಲವೆ ವ್ಯಕ್ತಿಯನ್ನು ಕಾಯುವಾಗ ಆ ವ್ಯಕ್ತಿ/ವಸ್ತುವನ್ನು ಕವಿಯಬೇಕಾಗುತ್ತದೆ. ಎತ್ತುಗೆಗೆ ತಾಯಿ ಇಲ್ಲವೆ ತಂದೆಯು ಮಗುವನ್ನು ತೋಳಿನಿಂದ ಬಳಸಿ ತಬ್ಬಿ ಮಕ್ಕಳಿಗೆ ಕಾವಲನ್ನು ಒದಗಿಸುತ್ತಾರೆ. ಹಾಗಾಗಿ ಮಗುವಿಗೆ ಹೊರಗಿನ ಚಳಿ, ಬಿಸಿಲು ಮತ್ತು ಇನ್ನಾವುದೇ ವಸ್ತುವಿನಿಂದ ಉಂಟಾಗುವ ತೊಂದರೆಯಿಂದ ಮಗುವನ್ನು ರಕ್ಶಿಸುತ್ತಾರೆ. ಅಶ್ಟೆ ಏಕೆ ಬಟ್ಟೆ/ಬೆಚ್ಚುಡುಪುಗಳನ್ನು ಉಡುವುದು ಕೂಡ ಬಿಸಿ, ಮಳೆ ಮತ್ತು ಚಳಿ ಮತ್ತಿತರೆ ಹೊರಗಿನವುಗಳಿಂದ ಮಯ್ಯನ್ನು ಪೊರೆಯುವುದಕ್ಕೇ ಅಲ್ಲವೆ?

ಇದರಿಂದ ತಿಳಿಯುವುದೇನೆಂದರೆ ಕಾಯುವುದಕ್ಕೆ ಇಲ್ಲವೆ ಕಾವಲಿಗೆ ಈ 'ಕವಿಯುವ' ಆಗುಹ ಇರಲೇಬೇಕು. ಕವಿಯದೇ/ಆವರಿಸದೆ(without covering) ಯಾವುದೇ ವಸ್ತು/ವ್ಯಕ್ತಿಯನ್ನು ಕಾಯುವುದು(ಕಾವಲು ಕೊಡುವುದು) ಆಗುವುದೇ ಅಲ್ಲ ಅತವಾ ಅದಕ್ಕೆ ಅರ್ತವೇ ಇಲ್ಲ. ಹಾಗಾಗಿ 

          ಕವಿ => ಕಾಪು=> ಕಾಹು=> ಕಾವಲ್ => ಕಾವಲು

ಕವಿಯುವುದರಿಂದಲೇ ಕಾಯುವುದು ಸಾದ್ಯವಾಗುವ ಕಾರಣ  'ಕಾವಲು' ಎಂಬ ಪದ 'ಕವಿ'ಯಿಂದ ಬಂದಿರಬೇಕು. ಹಾಗಾಗಿ ಕವಿ ಎಂಬುದಕ್ಕೆ ಕೊಟ್ಟಿರುವ ಹುರುಳುಗಳನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ.
ಕಪ್ಪು kappu to cover; spread, extend, overspread, surround;
ಕವಿ kavi to cover, overspread, come upon, rush upon, attack; n. a rushing upon, etc.;
ಕವಿಚು, ಕವಚು, ಕವುಚು kavicu, kavacu, kavucu to put upon, cause to come upon, etc.;
ಗವಸಣಿ, ಗವಸಣಿಕೆ, ಗವಸಣಿಗೆ gavasaṇi, gavasaṇike, gavasaṇige a cover, wrapper, case; gavasaṇisu to cover, wrap [DED 1221]

Monday, October 22, 2012

ರೊಟ್ಟಿ

  'ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ' ಎಂದಾಗ ಬಾಯಲ್ಲಿ ನೀರೂರುವುದು ಸಹಜ. ಇದಲ್ಲದೆ ಅಕ್ಕಿ ರೊಟ್ಟಿ, ಜೋಳದ ರೊಟ್ಟಿಯೂ ಕೂಡ ಮಾಡಲಾಗುತ್ತದೆ. ರೊಟ್ಟಿ ಬಡವರ ಮನೆಯ ತಿಂಡಿಯೂ ಹವ್ದು , ಉಳ್ಳವರ ತಿಂಡಿಯೂ ಹವ್ದು.
ಹಾಗಾದರೆ ರೊಟ್ಟಿಗೆ ಆ ಹೆಸರು ಬರಲು ಕಾರಣವೇನು ಎಂದು ಹುಡುಕಿದಾಗ

[DED 664]
ಉರುಳ್, ಉರಳು, ಉರಟು, ಉರಂಟು, ಉರುಟು, ಉರುಂಟು, ಉರ್ಟು, ಉರ್ಳು, ಉಳ್ಳು, ಉಂಟು uruḷ, uraḷu, uraṭu, uraṇṭu, uruṭu, uruṇṭu, urṭu, urḷu, uḷḷu, uṇṭu to roll, roll down, revolve, be turned over;
ಉಳುತು uḷutu to roll;
ಉರಳಿ, ಉರುಳಿ, ಉರ್ಳಿ, ಉಳ್ಳ, ಉಳ್ಳೆ, ಒಳ್ಳಿ uraḷi, uruḷi, urḷi, uḷḷa, uḷḷe, oḷḷi a ball, bulb, round vessel of earth or metal;
ಉರುಳು, ಉರುಟು, ಉರುಂಟು,ಉರ್ಳು, ಉರಲ್, ಉರ್ಲು uruḷu, uruṭu, uruṇṭu, urḷu, ural, urlu rolling, roundness;
ಉರಣೆ uraṇe roller for moving logs;
ಉರುಳಿಕೆ uruḷike rolling, revolving;
ಉರುಳಿಚು, ಉರುಳಿಸು, ಉರುಳ್ಚು uruḷicu, uruḷisu, uruḷcu to cause to roll, etc.;
ಉಟ್ಟು uṭṭu round stone used as an anchor, an anchor;
ಉಣ್ಡೆ uṇḍe a round mass or ball (e.g. of raw sugar, tamarind, clay, cowdung);

ಈ ಮೇಲಿನ ಪದಗಳನ್ನು ನೋಡಿದರೆ  ಉರುಟು ಎಂಬ ಪದಕ್ಕೆ  ಉರುಳುವುದು(rolling) ಇಲ್ಲವೆ ದುಂಡುತನ(roundness) ಎಂಬ ಹುರುಳಿದೆ ಎಂಬುದು ತಿಳಿಯುವುದು.

ಈಗ ರೊಟ್ಟಿಯನ್ನು ಹೇಗೆ ಮಾಡುತ್ತಾರೆ ಮತ್ತು ರೊಟ್ಟಿ ಯಾವ ಪರಿಜ(ಆಕಾರ)ಲ್ಲಿರುತ್ತದೆ ಎಂಬುದನ್ನು ನೋಡೋಣ:-
ಹಿಟ್ಟನ್ನು ತೆಗೆದುಕೊಂಡು ಮಣೆಯ ಮೇಲೆ ಹಾಕಿ ಲಟ್ಟಣಿಗೆಯನ್ನು ಹಿಟ್ಟಿನ ಮೇಲೆ ಅಮುಕಿ ಉರುಳಿಸಬೇಕು(means rolling). ಹೀಗೆ ಮತ್ತೆ ಲಟ್ಟಣಿಗೆಯನ್ನು ಉರುಳಿಸುವುದರಿಂದ ಹಿಟ್ಟು ತೆಳುವಾಗಿ ರೊಟ್ಟಿಯ ಪರಿಜಿಗೆ ಅಂದರೆ ದುಂಡಗೆ ಆಗುತ್ತದೆ. ಹಾಗಾಗಿ ಹೀಗೆ ಉರುಳಿಸಿ ಉರುಳಿಸಿ ಮಾಡಿದುದನ್ನು  'ಉರುಟಿ'(one which is rolled) ಎನ್ನಲು ಆಗುತ್ತದೆ.
    ಉರುಟು +ಇ  = ಉರುಟಿ

ಉರುಟಿ ಅಂದರೆ ಉರುಟಿಸಿ ಉರುಟಿಸಿ ಮಾಡಿದ್ದು.
ಉರುಟಿ ಅಂದರೆ ಉರುಟಾಗಿ ಇರುವುದು ಅಂದರೆ ದುಂಡಗೆ(round) ಇರುವುದು.

ಈಗ ಉಲಿಕದಲಿಕೆಯ ಬಗ್ಗೆ ನೋಡೋಣ. ಕನ್ನಡದಲ್ಲಿ(ಇಲ್ಲವೆ ದ್ರಾವಿಡ ನುಡಿಗಳಲ್ಲಿ )ಉಲಿಕದಲಿಕೆಯಾದಾಗ
   "ಪದದ ಮೊದಲಲ್ಲಿರುವ ತೆರೆಯುಲಿಯು ಬಿದ್ದು ಹೋಗುತ್ತದೆ. ಮತ್ತು  ಅದೇ ಗುಂಪಿನ ಉದ್ದ ತೆರೆಯುಲಿ ಪದದ ಎರಡನೇ ಬರಿಗೆಗೆ ಅಂದರೆ ಮುಚ್ಚುಲಿಗೆ ಬಂದು ಸೇರಿಕೊಳ್ಳುತ್ತದೆ"

ಕನ್ನಡದಲ್ಲಿ 'ಯ' ಮತ್ತು 'ವ' ಗುಂಪು ಎಂದು ತೆರೆಯುಲಿಗಳನ್ನು ಗುಂಪಿಸಬಹುದೆಂದು ಈ ಮಿಂಬರಹದಲ್ಲಿ ತೋರಿಸಿಕೊಡಲಾಗಿದೆ. ಅದರ ಪ್ರಕಾರ :-
ಯ - ಇ, ಈ, ಎ, ಏ,
ವ - ಅ,ಆ, ಉ, ಊ, ಒ, ಓ

'ಉರುಟಿ' ಎಂಬುದನ್ನು ಉಲಿಕಂತೆಯ ರೂಪದಲ್ಲಿ ಬರೆದರೆ ಹೀಗಿರುತ್ತದೆ: 
    ಉ+ರ್+ಉ+ಟ್+ಇ

ಉಲಿಕದಲಿಕೆ ಆದ ಮೇಲೆ ಅಂದರೆ 'ಉ' ಕಾರ ಬಿದ್ದು ಹೋಗಿ ಅದರ 'ಉಲಿಕದಲಿಕೆಯ ಜೋಡಿ'ಯಾದ 'ಓ'ಕಾರ ಬಂದು ಸೇರುವುದು ಮುಂದಿನ ಮುಚ್ಚುಲಿಯ ಜೊತೆ
.
   _ + ರ್+ಓ+ಟ+ಇ

ಇದನ್ನು ಕೂಡಿಸಿ ಬರೆದಾಗ

         ರೋಟಿ  ಎಂದಾಗುತ್ತದೆ.

ಇನ್ನು ಕನ್ನಡದಲ್ಲಿ ನಾಲ್ಕು ಉಲಿಗಳ ಪದಗಳಲ್ಲಿ ಅಂದರೆ 'ಮುತೆಮುತೆ' ( ಮು=ಮುಚ್ಚುಲಿ, ತೆ=ತೆರೆಯುಲಿ) ಮಾದರಿಯ ಪದಗಳಲ್ಲಿ ಮಾರ್ಪಾಗುವಾಗ ಕೆಲವು ಒಲವುಗಳನ್ನು ಗಮನಿಸಬಹುದು

     ಮುತೆಮುತೆ <=> ಮುತೆಮುಮುತೆ         ತಾಟು      <=> ತಟ್ಟೆ
         ಕೇಡು      <=> ಕೆಟ್ಟು
         ನೀಳ       <=> ನಿಟ್ಟು
         ಆಡೆ        <=> ಅಟ್ಟೆ (leech)
         ಪಾಡಿ      <=> ಪಟ್ಟಿ  (village, hamlet)
         ಪಾಚಿ      <=> ಪಚ್ಚೆ

ಎಡದಲ್ಲಿ ಕೊಟ್ಟಿರುವ ಪದಗಳಲ್ಲಿ ತಾ, ಕೇ, ನೀ, ಆ, ಪಾ ಎಂಬಲ್ಲಿರುವ ಉದ್ದ ತೆರೆಯುಲಿಯು ಮರ್ಪಾಟಾದ ಮೇಲೆ ಗಿಡ್ಡವಾಗುತ್ತದೆ. ಹೀಗೆ ಗಿಡ್ದವಾಗುವುದರಿಂದ ಆಮೇಲೆ ಬರುವ ಮುಚ್ಚುಲಿ ಇಮ್ಮಡಿಯಾಗುತ್ತದೆ. ಹಾಗಾಗಿ ಮೇಲಿನ ಪದಗಳಲ್ಲಿ ಟ್ಟೆ, ಟ್ಟು, ಚ್ಚೆ ಎಂಬ ಎಂಬ ಉಲಿಕಂತೆಯನ್ನು ಗಮನಿಸಬಹುದು.
     
ಹಾಗೆಯೇ,
    ರೋಟಿ <=> ರೊಟ್ಟಿ   ಅಂತ ಆಗಿದೆ

Saturday, October 13, 2012

ಕಾವೇರಿ

ತೆಂಕು ಕರ್ನಾಟಕದ ಬಲು ತಲೆಮೆಯ ಹೊಳೆಯೇ ಕಾವೇರಿ. ಕಾವೇರಿ ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿದರೂ ಮಂಡ್ಯ, ಮಯ್ಸೂರು ಮತ್ತು ಬೆಂಗಳೂರು ಕಂಪಣಗಳಿಗೆ ಈ ಹೊಳೆಯ ನೀರು ಬಳಕೆಯಾಗುವುದು ಹೆಚ್ಚು. ಕಾವೇರಿಯನ್ನು ’ಉಸಿರುಹೊಳೆ’(ಜೀವನದಿ) ಎಂದೂ ಕರೆಯುವುದುಂಟು. ಹಾಗಾದರೆ ಕಾವೇರಿ ಎಂಬ ಹೆಸರು ಹೇಗೆ ಬಂತು?

ಮೊದಲು, ಪಡುವಣ ಬೆಟ್ಟಗಳಲ್ಲಿ ಕಾಣಸಿಗುವ ಈ ಮರದ ಹೆಸರುಗಳ ಬಗ್ಗೆ ನೋಡೋಣ:-

ಕನ್ನಡದಲ್ಲಿ ಕಾಜವಾರ, ಕಾಜಿವಾರ, ಕಾಸರ, ಕಾಸರಕ, ಕಾಸರ್ಕ, ಕಾಸಾರಕ, ಕಾಸ್ರ
ತುಳುವಿನಲ್ಲಿ ಕಾಯೆರ್
ಕೊರಗದಲ್ಲಿ ಕಾವೇರಿ (ಇದು ಗಮನಿಸಬೇಕಾದ ಪದ)
ತಮಿಳಿನಲ್ಲಿ ಕಾಂಜಿರಯ್, ಕಾಂಜಿರಮ್
ಮಲೆಯಾಳದಲ್ಲಿ ಕಾಂಇರಮ್

Ka. kājavāra, kājivāra, kāñjira, kāsara, kāsarka, kāsarike, kāsāraka, kāsra strychnine tree(Strychnos nux vomica)
Tu. kāyer&uring; Nux vomica.
Kor. (O.) kāvēri a kind of tree (= Tu. kāyer&uring;).
Ta. kāñcirai, kāñciram strychnine tree.
Ma. kāññiram Strychnos nux vomica.   [DED - 1434]

ಪ್ರಜಾವಾಣಿ ಸುದ್ದಿಹಾಳೆಯ ಬರಹವನ್ನು ನೋಡಿದರೆ ಪಡುವಣ ಬೆಟ್ಟದ ಮಳೆಕಾಡುಗಳಲ್ಲಿ ಈ ಗಿಡ/ಮರ ಬೆಳೆಯುವುದು ಎಂದು ಹೇಳಲಾಗಿದೆ. ಹಾಗೆ ನೋಡಿದರೆ ತಲಕಾವೇರಿಯು ಕೂಡ ಪಡುವಣ ಬೆಟ್ಟದ ಮಗ್ಗುಲಲ್ಲೇ ಇದೆ.

"ಪಶ್ಚಿಮಘಟ್ಟದ ಯಡಕುಮೇರಿ ಹಾಗೂ ಕಾಗಿನಹರೆ ಕಾಯ್ದಿರಿಸಿದ ದಟ್ಟ ಮಳೆಕಾಡಿನಲ್ಲಿ ಹಾಲೆ (ಅಲ್ಟೋನಿಯಾ ಸ್ಕೋಲೋರೀಸ್), ಕಾಸರ್ಕ (ಸ್ಟ್ರಿಕ್ಟನೆಸ್ ನೆಕ್ಸೋಮಿಕಾ), ಬೋಗಿ(ಹೋಪಿಯಾ ಪೋಂಗಾ) ಹೊಂಗೆ (ಹೊಂಗೇನಿಯಾ ಪಿನ್ನಾಟ) ಕಿರೋಲ್ ಬೋಗಿ, (ಹೋಪಿಯಾ ಫರ‌್ವಿಪ್ಲೋರಾ) ರಕ್ತದ ಮರ, ದೂಪದ ಮರ (ವೆಟೆರಿಯಾ ಇಂಡಿಕಾ) ಸಾಗವಾನಿ (ಟೆಕ್ಟೋನಾ ಗ್ರಾಂಡೀಸ್) ಕಾಡು ಶುಂಠಿ, ಕಾಡು ಸೊಪ್ಪು, ವಾಟೆ ಬಿದಿರು, ಚಕ್ರಾಣಿ, ಕಾಡು ಅಮೃತ ಬಳ್ಳಿ, ಕಾಡು ಮಾವು, ಗುಳಿಮಾವು, ನಂದಿ, .. ಹೀಗೆ ಸಾವಿರಾರು ಬಗೆಯ ಸಸ್ಯ ಸಂಪತ್ತು, ಔಷಧೀಯ ಗಿಡಮೂಲಿಕೆಗಳು ಇವೆ."

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಈ ಮಳೆಕಾಡುಗಳ ಪಡುವಣಕ್ಕೆ ಅಂದರೆ ಕೇರಳದ ಕಡೆಗೆ ಹೋದರೆ ’ಕಾಸರಗೋಡು’ ಎಂಬ ಊರು ಸಿಗುತ್ತದೆ. ಹಾಗಾಗಿ ಪಡುವಣದ ಈ ಮಳೆ ಕಾಡುಗಳ ನಡುವೆ/ಹತ್ತಿರ ಈ ಹೆಸರಿನ ಊರುಗಳು ಇರಬಹುದು. ಇದಕ್ಕೆ ಈ ಕಾಸರ್ಕ ಎಂಬ ಈ ಮರವೇ ಕಾರಣವಾಗಿರಬಹುದು.  ಇದೇ ಕಾಡುಗಳಲ್ಲಿ ಹುಟ್ಟುವ ಈ ಹೊಳೆಗೆ ’ಕಾವೇರಿ’ ಎಂದು ಏಕೆ ಹೆಸರು ಬಂದಿರಬಾರದು ಅಂತ ಅನ್ನಿಸಿತು. ಮೇಲೆ ತಿಳಿಸಿದಂತೆ ಅಚ್ಚ ಕೊರಗ ನುಡಿಯಲ್ಲಿ ಕಾವೇರಿ ಅಂದರೆ ’ಒಂದು ತೆರದ ಮರ’ ಎಂಬ ಹುರುಳೇ ಇದೆ.