ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Tuesday, April 8, 2014

ಕುರಿಕೆ, ಕುರ‍್ಕೆ, ಕುಕ್ಕೆ

ಪಾಲ್ಕುರಿಕೆ, ಕುಕ್ಕೆ ಸುಬ್ರಮಣ್ಯ, ಮೇಟಿಕುರ‍್ಕೆ ಎಂಬ ಊರಿನ ಹೆಸರುಗಳನ್ನು ಗಮನಿಸಬಹುದು. ಇವುಗಳಲ್ಲಿರುವ ಪದ ’ಕುರಿಕೆ’ ಎಂಬುದು ತಿಳಿಯಾಗಿ ಕಾಣುತ್ತದೆ.

ಕುರಿಕೆ ಎಂಬುದಕ್ಕೆ ’ಹಳ್ಳಿ’ ಎಂಬ ಹುರುಳನ್ನು ಕೊಡಲಾಗಿದೆ
ಕುರಿಕೆ(<ಕುಱಿಕೆ) Ka. kuṟike village. [DED 1844]

ಇಲ್ಲಿ ಪಾಲ್ಕುರಿಕೆ ಎಂದರೆ ಹಾಲುಹಳ್ಳಿ, ಮೇಟಿಕುರಿಕೆ(ಮೇಟಿಕುರ‍್ಕೆ) ಎಂದರೆ ರಯ್ತರಹಳ್ಳಿ ಎಂತಲೂ ಹುರುಳು ಬರುತ್ತದೆ.
ಕುರುಬ, ಕುರುಂಬ Ka. kuṟuba man of the shepherd caste; kuṟumba a caste of mountaineers [DED 1844]
 
ಕುರುಬ, ಕುರುಂಬ ಮತ್ತು ಕುರಿಕೆ ಎಂಬ ಎರಡೂ ಪದಗಳು ಒಂದೇ ಬೇರುಪದದಿಂದ ಬಂದಿದೆ ಎಂದು ದ್ರಾವಿಡಿಯನ್ ಪದನೆರಕೆಯಲ್ಲಿ ಕೊಡಲಾಗಿದೆ. ಆದ್ದರಿಂದ ಕುರುಬರು(ಕುರಿ ಸಾಕುವವರು) ಇಲ್ಲವೆ ಕುರುಂಬರು(ಬೆಟ್ಟದಲ್ಲಿ ವಾಸಿಸುವವರು) ಹೆಚ್ಚಾಗಿ ವಾಸಿಸುವ ಊರಿಗೆ ಕುರಿಕೆ ಎಂಬ ಪದದ ಬಳಕೆ ಬಂದಿರಬಹುದು. ಪಾಲ್ಕುರಿಕೆ ಎಂಬುವಲ್ಲಿ ’ಹಾಲು’ ಎಂಬ ಪದವಿದೆ. ಹಾಲಿಗೂ, ಕುರುಬರಿಗೂ ಬಿಡಿಸಲಾರದ ನಂಟಿದೆ. ಇನ್ನು ಕುಕ್ಕೆ ಸುಬ್ರಮಣ್ಯ ಹಳ್ಳಿಯು ಬೆಟ್ಟದ ಕಣಿವೆಯಲ್ಲಿರುವ ಒಂದು ಊರು.
ಕುರ‍್ಕೆ ಎಂಬ ಪದ ’ಕುಕ್ಕೆ’ ಆಗುವುದಕ್ಕೆ ಹೊಸಗನ್ನಡದಲ್ಲಿ ಅನುವಿದೆ ಯಾಕಂದರೆ ಹೊಸಗನ್ನಡದಲ್ಲಿ ’ರ್’ ಕಾರದ ಮುಂದೆ ಕ,ಚ,ಟ,ತ,ಪ ದಂತಹ ಮುಚ್ಚುಲಿಗಳು ಬಂದಾಗ ’ರ್’ ಕಾರ ಬಿದ್ದುಹೋಗಿ ಮುಚ್ಚುಲಿ ಇಮ್ಮಡಿಯಾಗುತ್ತದೆ. ಎತ್ತುಗೆಗೆ:-
 
ಸುರ‍್ಕು -> ಸುಕ್ಕು
ಉರ‍್ಚು -> ಉಚ್ಚು
ಕರ‍್ತಲೆ -> ಕತ್ತಲೆ
ಇರ‍್ಪ  -> ಇಪ್ಪ

ತೇಟ್

ಆಡುನುಡಿಯಲ್ಲಿರುವ ಬಳಕೆ:-

೧. ಅವ್ನ್ ನೋಡು, ತೇಟ್ ಅವರ ಅಪ್ಪನ್ ತರಾನೆ ಅವ್ನೆ
೨. ಇವರೇನು ಅವಳಿ-ಜವಳಿನಾ? ತೇಟ್ ಒಂದೇ ತರ ಅವ್ರೆ

ಇದರಲ್ಲಿ ತೇಟ್ ಎಂಬುದಕ್ಕೆ clearly/certainly ಎಂಬ ಹುರುಳುಗಳಿವೆ. ಇಂತಹ ಹುರುಳಿರುವ ಪದಗಳನ್ನು ಪದನೆರಕೆಯಲ್ಲಿ ಹುಡುಕಿದಾಗ
ತೇಟ, ತೇಟೆ Ka. tēṭa, tēṭe clearness, purity (as that of water, etc.); [DED 3471]

ಇದರ ತಮಿಳಿನಲ್ಲಿರುವ ಸಾಟಿ ಪದಗಳು
ತೇಱ್ಱಮ್(ತೇಟ್ರಮ್) Ta. tēṟṟam certainty, assurance, determination, clearness [DED 3471]

ಯಾವುದೇ ವಿಶಯವನ್ನು ಒತ್ತಿ ಇಲ್ಲವೆ ನಿಕ್ಕಿಯಾಗಿ ಹೇಳಬೇಕಾದರೆ ’ತೇಟ್’ ಪದದ ಬಳಕೆಯು ಕಂಡು ಬರುತ್ತದೆ.

 

Friday, April 4, 2014

ತೊತ್ತು, ದುಡಿ


ತೊತ್ತು ಮತ್ತು ದುಡಿ ಎಂಬ ಬಳಕೆಗಳು ಸಾಮಾನ್ಯವಾಗಿವೆ.

೧. "ಸಲೆಯಾಳಿಗೊಂಬವರ ತೊತ್ತಿನ ಮಗ" - ಬಸವಣ್ಣನ ವಚನ
೨. ದುಡಿಯುವವರಿಗೆ ಕೂಲಿಯನ್ನು ಕೊಡಬೇಕು

ತೊತ್ತು ಎಂಬ ಪದವೇ ತುೞಿಲ್, ತೊೞ್ತು ಎಂಬ ಹಳಗನ್ನಡದ ಪದಗಳಿಂದ ಬಂದಿದೆ.

ತುೞಿಲ್ Ka. tur̤il work, servitude, slavery; tor̤tu, tottu (a male, but esp. also a female) servant, a strumpet. [DED 3524]
ದುಡಿ ಎಂಬ ಪದದ ಹುರುಳು ಹೀಗಿದೆ
ದುಡಿ - Ka. duḍi to labour, acquire by one's labour or efforts; duḍita acquisition, gain; duḍime acquiring, requisition, gain [DED 3295]  Cf. 3524
 
 
ದ್ರಾವಿಡಿಯನ್ ಪದನೆರಕೆಯಲ್ಲಿ ಈ ಎರಡು ಪದಗಳಿಗೆ ನಂಟನ್ನು ಕಲ್ಪಿಸಲಾಗಿದೆ. ಇದು ಎರಡು ಪದಗಳ ಹುರುಳಿಗೆ ಇರುವ ಹೋಲಿಕೆಯನ್ನು ತೋರಿಸುತ್ತದೆ. ದುಡಿತ ಮಾಡದೆ ತೊತ್ತು(ದಾಸ) ಆಗಲಾಗದು. ದುಡಿತವಿಲ್ಲದೆ ಕೆಲಸ(ತುೞಿಲ್) ಮಾಡಲಾಗದು. 

ಇನ್ನು ಉಲಿಯರಿಮೆಯ ಕಣ್ಣಿನಿಂದ ಈ ಪದಗಳನ್ನು ನೋಡಿದಾಗ ಇವುಗಳಿಗಿರುವ ಹತ್ತಿರವನ್ನು ಅರಿತುಕೊಳ್ಳಬಹುದು.
                                  ತುೞಿ(ಲ್) ==> ದುಡಿ

ತು=>ದು  ’ತ’ ಎಂಬ ಕೊರಲಿಸದ ಉಲಿಯು ’ದ’ ಎಂಬ ಕೊರಲಿಸಿದ ಉಲಿಯಾಗಿ ಮಾರ‍್ಪಾಟಾಗಿರುವುದು
ೞಿ=>ಡಿ    ಇನ್ನು ಕನ್ನಡ ನುಡಿಯ ಹಿನ್ನಡವಳಿಯಲ್ಲಿ "ೞ್’ ಕಾರವು ’ಡ/ಣ’ ಕಾರವಾಗಿರುವುದಕ್ಕೆ ಹಲವು ಎತ್ತುಗೆಗಳು ಇಲ್ಲಿ ಸಿಗುತ್ತವೆ

Friday, January 3, 2014

ಮುಳ್ಳು-ಮೊಳೆ

ಮುಳ್ಳು ಪದದ ಕೆಲವು ಬಳಕೆಗಳು :-

೧. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು
೨. ಇದು ಮಗ್ಗುಲ ಮುಳ್ಳಾಗಿ ಕಾಡುತ್ತಿದೆ
೩. ಮುಳ್ಳೇ ಇಲ್ಲದ ಗುಲಾಬಿ ಹೂವಿಲ್ಲ
೪. ಈ ಗಡಿಯಾರದಲ್ಲಿ ದೊಡ್ಡ ಮುಳ್ಳು ಮುರಿದದೆ
೫. ಈ ತಕ್ಕಡಿ ಮುಳ್ಳು ಆ ಕಡೆಗೆ ವಾಲಿದೆ
೬. ಅವರು ಮುಳ್ಳುಚಮಚದಲ್ಲಿ ಹಣ್ಣನ್ನು ತೆಗೆದುಕೊಂಡು ತಿನ್ನುತ್ತಾರೆ

ಮುಳ್ಳು ಎಂಬ ಪದಕ್ಕೆ ಹಲವು ರೂಪಗಳು ಮತ್ತು ಹುರುಳುಗಳಿವೆ
ಮುಳ್, ಮುಳು, ಮುಳ್ಳು Ka. muḷ, muḷu, muḷḷu thorn, pointed thing as a prickle, a sting, spur, hand of a clock, tongue of a balance, etc.; vb. to prick, sting; muḷuhu pricking, stinging, goading, goad; muḷḷa hand of a clock; muḷḷu fork [DED 4995]

DED ಅಲ್ಲಿ ಇದನ್ನು ಇನ್ನೊಂದು ಬೇರುಪದಕ್ಕೆ ಕೊಂಡಿಸಲಾಗಿದೆ.  Cf. 4998

ಮೊಳೆ Ka. moḷe pin, nail, spike, wedge, peg, stake, pointed object.[DED 4998]

ಮೊಳೆ ಪದದ ಬಳಕೆಗಳು
೧. ಈ ಗೋಡೆಗೆ ಮೊಳೆ ಹೊಡೆದಿದ್ದಾರೆ
೨. ಇಲ್ಲಿ ಶಾಮಿಯಾನ ಹಾಕಲು ದೊಡ್ಡ ದೊಡ್ಡ ಮೊಳೆಗಳನ್ನು ನಾಟಲಾಗಿದೆ

ಇವೆರಡೂ ಬೇರುಪದಗಳ ಹುರುಳಾದ ಚೂಪುತನದ ಮೇಲೆಯೇ ಇವನ್ನು ಕೊಂಡಿಸಲಾಗಿದೆ. ಆದರೆ ಮುಳ್ಳು(thorn) ಎಂಬುದು ತಾನಾಗಿಯೇ ಸುತ್ತಣದಲ್ಲಿ ದೊರೆಯುವುದು ಆದರೆ ಮೊಳೆ(nail) ಎಂಬುದು ಮಾನವನಿಂದ ಉಂಟಾದ ವಸ್ತು. ಹಾಗಾಗಿ ಒಂದು ಹೆಜ್ಜೆ ಮುಂದೆ ಹೋಗಿ ಮುಳ್ಳಿನಿಂದಲೇ ಮೊಳೆ ಎಂಬ ಪದದ ಹುಟ್ಟಿರಬಹುದೆಂದು ಹೇಳಬಹುದಾಗಿದೆ.

Tuesday, February 26, 2013

ಅಣ್ಣಮ್ಮ

ಬೆಂಗಳೂರಿನ ಊರದೇವತೆ ಅಣ್ಣಮ್ಮ. ಆದರೆ ಅಣ್ಣಮ್ಮ ಅಂತ ಹೆಸರು ಏಕೆ ಬಂತು ಅಂತ ಯಾರನ್ನೂ ಕೇಳಿದರೂ ನಿಮಗೆ ಉತ್ತರ ದೊರೆಯುವುದಿಲ್ಲ. ಕೆಲವರು ಇದೇನು ಅಣ್ಣ(brother)+ಅಮ್ಮ ವಿಚಿತ್ರವಾಗಿದಿಯೆಲ್ಲ ಈ ಹೆಸರು ಎಂದು ಹೇಳುವುದುಂಟು. ಇದು ಅರಿವಿನ ಕೊರತೆಯಶ್ಟೆ ಎಂದು ಹೇಳಬಹುದು.

’ಅಣ್ಣಮ್ಮ’ ಎಂಬುದು ಅಣ್ಣೆಗನ್ನಡ ಪದ. ಒಹ್! ಅಣ್ಣಮ್ಮ ಪದದ ಒಳಗುಟ್ಟು ಇಲ್ಲೇ ಇದೆ.

ಅಣ್ಣೆ, ಅಣ್ಣ, ಅಣ Ka. aṇṇe, aṇṇa, aṇa excellence, purity; aṇṇālige uvula  [DED 110]

ಅಣ್ಣ/ಅಣ್ಣೆ ಎಂಬುದಕ್ಕೆ  ಮೇಲ್ಮೆ, ಮೇಟಿ, ಸೊಗಸು ಎಂಬ ಹುರುಳುಗಳಿವೆ. ಯಾವಾಗಲೂ ದೇವರು ಎಂಬುದು ದೊಡ್ಡ ಶಕ್ತಿ ಎಂಬ ಅನಿಸಿಕೆ ಮಂದಿಯ ಬಗೆಯಲ್ಲಿ ಬೇರೂರಿದೆ. ಅದ್ದರಿಂದ ಅಣ್ಣ+ಅಮ್ಮ => ಅಣ್ಣಮ್ಮ ಎಂಬ ಹೆಸರು ಬಂದಿದೆ.

ಮೇಲೆ ಕೊಟ್ಟಿರುವಂತೆ ’ಅಣ್ಣ’ ಎಂಬುದಕ್ಕೆ ’purity'(ಶುದ್ದ, ಸ್ವಚ್ಚ) ಎಂಬ ಹುರುಳಿದೆ. ದೇವರಿಗೆ ಎಲ್ಲ ಒಳ್ಳೆ ಗುಣಗಳನ್ನು ಹೊಂದಿಸುವಲ್ಲಿ ನಮ್ಮ ಮಂದಿ ನೆಮ್ಮದಿಯನ್ನು ಕಾಣುತ್ತಾರೆ. ಆದ್ದರಿಂದ ’ಅಣ್ಣಮ್ಮ’ಎಂಬ ಪದ ಬಂದಿರುವುದರಲ್ಲಿ ಅಚ್ಚರಿಯೇನಿಲ್ಲ.

ಮೇಳೆ ತಿಳಿಸಿದ ಗುಣಗಳನ್ನು ಅಣ್ಣಮ್ಮ ಎಂಬ ಪದ ಒಳಗೊಂಡಿರುವುದರಿಂದಲೇ ಅಣ್ಣಮ್ಮ ಬೆಂಗಳೂರಿನ ’ಊರದೇವತೆ’ಯಾಗಿರುವುದೆಂದು ತೋರುತ್ತದೆ.

Monday, January 28, 2013

ಹೀಗೆ, ಹಾಗೆ, ಹೇಗೆ

ಈ ಮೇಲಿನ ಪದಗಳನ್ನು ನಮ್ಮ ದಿನಬಳಕೆಯಲ್ಲಿ ಹೆಚ್ಚಾಗಿ ಕಾಣಬಹುದು

೧. ಅವರು ಹಾಗೆ ಮಾಡಿದುದರಿಂದ ಇವರು ಹೀಗೆ ಮಾಡಿದರು
೨. ಈ ಕೆಲಸವನ್ನು ಮಾಡುವುದು ಹೇಗೆ?

ಇದಲ್ಲದೆ ಇನ್ನಿತರ ಬಳಕೆಗಳಿವೆ:-
ಹೀಗೆ =  ಹಿಂಗೆ, ಇಂಗೆ(ತೆಂಕುನುಡಿ), ಹೀಂಗ (ಬಡಗು ನುಡಿ)
ಹಾಗೆ = ಹಂಗೆ, ಅಂಗೆ(ತೆಂಕುನುಡಿ), ಹಾಂಗ(ಬಡಗು ನುಡಿ)
ಹೇಗೆ = ಹೆಂಗೆ, ಎಂಗೆ(ತೆಂಕುನುಡಿ), ಹ್ಯಾಂಗ(ಬಡಗು ನುಡಿ), ಹ್ಯಾಗೆ,

 ihage, ihaṅge, ihige, hīge, hīṅge in this manner, thus [DED 410]
ahage, ahaṅge, hāge, hāṅge in that manner, thus [DED 1]
ehage, ehaṅge, eheṅge, eṅge, heṅge, hēge, hēṅge, hyāge hyāṅge in what manner [DED 5151]

ಹಾಗಾದರೆ ಹೀಗೆ, ಹಾಗೆ, ಹೇಗೆ -ಇವುಗಳ  ಒಳಗುಟ್ಟೇನು ಎಂಬುದನ್ನು ನೋಡೋಣ.

ಬಿಡಿಸಿಕೆ ೧:
ಇ + ಹಗೆ = ಇಹಗೆ =ಇ+ಹ್+ಅ+ಗೆ ===ಉಲಿಕದಲಿಕೆಯಾದ ಮೇಲೆ===> ಹ್+ಈ+ಗೆ => ಹೀಗೆ
ಅ + ಹಗೆ = ಅಹಗೆ =ಅ+ಹ್+ಅ+ಗೆ ===ಉಲಿಕದಲಿಕೆಯಾದ ಮೇಲೆ===> ಹ್+ಆ+ಗೆ  => ಹಾಗೆ
ಎ + ಹಗೆ = ಎಹಗೆ =ಎ+ಹ್+ಅ+ಗೆ ===ಉಲಿಕದಲಿಕೆಯಾದ ಮೇಲೆ===> ಹ್+ಏ+ಗೆ  => ಹೇಗೆ

ಇಲ್ಲಿ ಮೊದಲಲ್ಲಿರುವ ಇ,ಅ,ಎ ಎಂಬಿವುಗಳು ಉದ್ದ ತೆರೆಯುಲಿಗಳಾಗಿ ಈ, ಆ, ಏ  ಆಗಿ ಮಾರ್ಪಾಟಾಗಿವೆ.

ಕನ್ನಡದಲ್ಲಿ 'ಯ' ಮತ್ತು 'ವ' ಗುಂಪು ಎಂದು ತೆರೆಯುಲಿಗಳನ್ನು ಗುಂಪಿಸಬಹುದೆಂದು ಈ ಮಿಂಬರಹದಲ್ಲಿ ತೋರಿಸಿಕೊಡಲಾಗಿದೆ. ಅದರ ಪ್ರಕಾರ :-
ಯ - ಇ, ಈ, ಎ, ಏ,
ವ - ಅ,ಆ, ಉ, ಊ, ಒ, ಓ

ಹಾಗಾಗಿ  ಇ ಎಂಬುದು ಉಲಿಕದಲಿಕೆಯಾದಾಗ ’ಈ’ ಆಗುತ್ತದೆ
              ಅ ಎಂಬುದು ಉಲಿಕದಲಿಕೆಯಾದಾಗ ’ಆ’ ಆಗುತ್ತದೆ
              ಎ ಎಂಬುದು ಉಲಿಕದಲಿಕೆಯಾದಾಗ ’ಏ’ ಆಗುತ್ತದೆ

ಇನ್ನು ’ಹಗೆ’(ಪು ೧೬೨೦) ಎಂಬುದಕ್ಕೆ ಕಿಟ್ಟೆಲ್ ರವರು ತಮ್ಮ ಪದನೆರಕೆಯಲ್ಲಿ Manner , Mode ಎಂಬ ಹುರುಳುಗಳನ್ನು ಕೊಟ್ಟಿದ್ದಾರೆ.

ಆದರೆ ಆಡುಮಾತಿನಲ್ಲಿರುವ ಇಂಗೆ, ಅಂಗೆ,  ಎಂಗೆ ಎಂಬುವಲ್ಲಿ ಬರುವ ’ಮೂಗುಲಿ’ಯು ’ಹಗೆ’ ಎಂಬ ಪದದ ಬಗ್ಗೆ ಇನ್ನು ಉಂಕಿಸಲು ಒತ್ತಾಯ ಮಾಡುತ್ತದೆ.
ಪಾಂಗು Ka. pāṅgu manner, form, shape [DED 4053]

ಹಗೆ ಮತ್ತು ಬಗೆ (ಕಿಟ್ಟೆಲ್, ಪುಟ೧೦೬೩, a manner, a mode) ಇವುಗಳಿಗೆ ’ಪಾಂಗು’ ಎಂಬುದೇ ಬೇರು ಪದವಾಗಿರುವಂತೆ ತೋರುತ್ತದೆ.

ಪಾಂಗು => ಪಗೆ => ಹಗೆ
ಪಾಂಗು => ಪಗೆ => ಬಗೆ

ನೋಡಿ, ಮೊದಮೊದಲು ’ಪಾಂಗು’ ಎಂಬುದು ಗೊತ್ತಿಲ್ಲದ/ಬಳಕೆಯಿಲ್ಲದ ಪದವಾಗಿ ಕಂಡರೂ ಅದನ್ನು ನಮಗರಿವಿಲ್ಲದಂತೆ ದಿನಾಲೂ ಬಳಸುತ್ತಿದ್ದೇವೆ.

ಈ ಪದದ ಗುಟ್ಟಿನ ಬಗ್ಗೆ ಸುಳುಹುಗಳನ್ನು ಕೊಟ್ಟ ಗೆಳೆಯ ಸಂದೀಪ್ ಕಂಬಿಯವರಿಗೆ ನನ್ನಿ

Saturday, January 19, 2013

ತಬ್ಬಲಿ

ಬಳಕೆ:
೧. ಆ ಹುಡುಗನನ್ನು ತಬ್ಬಲಿ ಮಾಡಬೇಡಿ
೨. ಅವನು ತಾಯಿ ಇಲ್ಲದ ತಬ್ಬಲಿ ಎಂದು ಇವರೇ ಅವನನ್ನು ಸಾಕಿದರು

ಬಿಡಿಸಿಕೆ:
     ತಬ್ಬು + ಇಲಿ = ತಬ್ಬಿಲಿ => ತಬ್ಬಲಿ

ತರ್ಬು, ತಬ್ಬು tarbu, tabbu to embrace ; n. an embrace  [DED 3116]

ಇಲ್ಲ, ಇಲ  ila a man who has not [DED 2559]
ಇಲಿ one who has not

ಅಂದರೆ ಯಾವ ಮನುಶ್ಯನಿಗೆ/ಮಗುವಿಗೆ ತಬ್ಬಿ ಮುದ್ದಾಡುವ ತಂದೆ, ತಾಯಿ, ಅಕ್ಕ, ಅಣ್ಣ, ತಮ್ಮ, ತಂಗಿ ಇವರು ಯಾರೂ ಇರುವುದಿಲ್ಲವೊ ಅವರನ್ನು ತಬ್ಬಲಿ ಎನ್ನಬಹುದಾಗಿದೆ.