ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Saturday, April 2, 2016

ಸುಂಟಿ/ಶುಂಟಿ ಪೆಪ್ಪರ‍್ಮೆಂಟ್

ಚಿಕ್ಕವರಿದ್ದಾಗ ಅಯ್ದು ಪಯ್ಸೆಗೆ ಸಿಗುತ್ತಿದ್ದ ಸುಂಟಿ ಪೆಪ್ಪರ‍್ಮೆಂಟನ್ನು ನಾವೆಲ್ಲರೂ ತಿಂದಿರುತ್ತೇವೆ. ಆದರೆ ಅದರಲ್ಲಿ ’ಶುಂಟಿ’(ginger) ಇರುವುದಿಲ್ಲ ಬದಲಾಗಿ ಪುದೀನ(mint) ಇರುತ್ತದೆ. ಆದರೂ ಅದಕ್ಕೆ ಸುಂಟಿ ಪೆಪ್ಪರ‍್ಮೆಂಟ್ ಎಂದು ಹೇಳುವುದು ಏತಕ್ಕೆ? ನೋಡೋಣ

ಯಾವುದೇ ತಿನಿಸನ್ನು ತಿನ್ನುವ ಮೊದಲು ಅದು ನಮ್ಮ ಕಣ್ಣಿಗೆ ಬೀಳುತ್ತದೆ. ಎಶ್ಟೊ ವಸ್ತುಗಳಿಗೆ ಕೊಟ್ಟ ಹೆಸರುಗಳು ಅವುಗಳ ನಮ್ಮ ಕಣ್ಣಿಗೆ ಹೇಗೆ ಕಾಣಿಸುತ್ತವೆ ಎಂಬುದರ ಮೇಲೆ ನಿಂತಿದೆ. ಯಾವುದೇ ತಿಂಡಿ-ತಿನಿಸನ್ನು ತಿನ್ನುವ ಮೊದಲು, ಅದು ಯಾವ ಆಕಾರ ಇಲ್ಲವೆ ಬಣ್ಣ ಇಲ್ಲವೆ ಅದರ ಮತ್ಯಾವುದೋ ಗುಣದ ಮೇಲೆ ನಾವು ವಸ್ತುವನ್ನು ಗುರುತಿಸುತ್ತೇವೆ. ಇಲ್ಲವೆ ಅದರ ಕಂಪಿನಿಂದ ಗುರುತಿಸುತ್ತೇವೆ.

ಹಾಗೆಯೇ, ಸುಂಟಿ ಪೆಪ್ಪರ‍್ಮೆಂಟಿಗೆ ಆ ಹೆಸರು ಬಂದಿರಲು ಅದರ ಆಕಾರವೇ ಮುಕ್ಯ ಕಾರಣ ಎಂದು ಹೇಳಬಹುದು. ಯಾಕಂದರೆ
ಸುರುಟು, ಸುರುಂಟು Ka. suruu, suruṇṭu to coil, roll up [DED - 2684] ಎಂಬ ಹುರುಳುಗಳಿವೆ.

ಸುತ್ತುವ ಇಲ್ಲವೆ ದುಂಡನೆ ಇಲ್ಲವೆ ತಿರುಗಿರುವ ಆಕಾರದ ಕಲ್ಪನೆಗೂ ಸುರುಟು/ಸುರುಂಟು ಎಂಬ ಪದಗಳಿಗೂ ನಂಟಿರುವುದನ್ನು ಗುರುತಿಸಬಹುದು. ಇಲ್ಲಿ ಸುರುಂಟು ಎಂಬುದು ಎಸಕ ಪದವಾಗಿರುವುದರಿಂದ ಸುರುಂಟಿ ಎಂಬ ಪದವು ಅದಕ್ಕೆ ಸಂಬಂದಿಸಿದ ಹೆಸರು ಪದವಾಗುತ್ತದೆ. ಅಂದರೆ ದುಂಡು ಮಾಡುವ ಕೆಲಸಕ್ಕೊ ಇಲ್ಲವೆ ಆ ಕೆಲಸ ಯಾವುದರ ಮೇಲೆ ನಡೆದಿದೆ ಎಂಬುದನ್ನು ಸೂಚಿಸುವುದಕ್ಕೆ ಬಳಸಬಹುದು.
ಎತ್ತುಗೆಗೆ: ’ನಾಟು’ ಎಂಬ ಪದಕ್ಕೆ ’to plant’ ಎಂಬ ಹುರುಳಿದ್ದರೆ ’ನಾಟಿ’ ಎಂಬ ಪದಕ್ಕೆ ಎರಡು ಹುರುಳುಗಳಿವೆ. ಒಂದು ’ನಾಟಿ’ ಮಾಡುವ ಕೆಲಸವಾದರೆ ಇನ್ನೊಂದು ನಾಟಿ ಮಾಡುತ್ತಿರುವ ಸಸಿ ಇಲ್ಲವೆ ಪಯಿರಿಗೂ ಹೊಂದುತ್ತದೆ. ಅದೇ ತೆರನಾಗಿ ’ಸುರುಂಟಿ’ ಎಂಬುದು ದುಂಡಾಗಿರುವ ವಸ್ತುವನ್ನು ಸೂಚಿಸುತ್ತದೆ.

ಇದಲ್ಲದೆ ಕನ್ನಡದಲ್ಲಿ  ಸುಟ್ಟರೆ suṭṭare a whirlwind [DED -2715] ಎಂಬು ಹುರುಳಿದೆ. ಅಂದರೆ ತಿರುಗುತ್ತಾ ತಿರುಗುತ್ತಾ ಬರುತ್ತಿರುವ ಗಾಳಿ. ಇದೇ ಪದದ ಇನ್ನು ಹಲವು ರೂಪಗಳಿವೆ – ಸುಣ್ಟರ, ಸುಣ್ಟ್ರು. ಇದರಲ್ಲೂ ’ಸುರುಂಟು’ ಪದದ ಹಾಗೆ ದುಂಡನೆ ಇಲ್ಲವೆ ತಿರುಗುಗಿರುವ ಇಲ್ಲವೆ ಸುತ್ತುವ ಆಕಾರದ ಕಲ್ಪನೆಯನ್ನು ಗುರುತಿಸಬಹುದು.  ಸುಣ್ಟರ ಎಂಬುದು ಸುರುಂಟಿ ಎಂಬುದರ ಇನ್ನೊಂದು ರೂಪವೆಂದು ಇದರಿಂದ ತಿಳಿಯುತ್ತದೆ. ಈ  ’ಸುಂಟಿ’ ಎಂಬ ಪದ, ಮಯ್ಸೂರಿನಲ್ಲಿ ಇನ್ನೊಂದು ಸಂದರ್ಬದಲ್ಲಿ ಬಳಕೆಯಲ್ಲಿದೆ. ಅದೇ ಒಳಸುಂಟಿ, ಅಂದರೆ ಬೆರಳುಗಳಿಂದ ತೊಡೆಯ ಮೇಲೆ ಗಿಂಡಿ ತಿರುವುವುದು. ’ಸುಂಟಿ’ ಎಂಬುದರ ಹಿಂದೆ ’ತಿರುವು’ವುದರ ಕಲ್ಪನೆಯಿದೆ ಎಂಬುದಕ್ಕ ಇದು ಮತ್ತೊಂದು ನಿಂದರಿಕೆ.

No comments:

Post a Comment