ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Wednesday, August 10, 2016

ಅಣ್ಣ

ಅಣ್ಣ ಎಂಬ ಪದವನ್ನು ಹಲವು ತೆರದಲ್ಲಿ ಬಳಸುವುದುಂಟು:-
೧. ತನಗಿಂತ ಮೊದಲೇ, ಒಡ ಹುಟ್ಟಿದವನನ್ನು ಕರೆಯಲು 'ಅಣ್ಣ' ಹೆಚ್ಚು ಬಳಕೆಯಲ್ಲಿದೆ. ಅಂದರೆ ಹರೆಯದಲ್ಲಿ ದೊಡ್ಡವನು.  ಅವಳಿ-ಜವಳಿ ಮಕ್ಕಳಲ್ಲೂ ಒಂದೆರಡು ನಿಮಿಶ ಮುಂಚೆ ಹುಟ್ಟಿದವನೇ ಅಣ್ಣನಾಗುತ್ತಾನೆ.
೨. ತನಗಿಂತ ದೊಡ್ಡವರಾದ ಗಂಡಸರಲ್ಲಿ ಹೆಚ್ಚಿನವರನ್ನು 'ಅಣ್ಣ' ಎಂದು ಕರೆಯುವುದುಂಟು. ಅಲ್ಲದೆ ಅವರಿಗೆ ಮದಿಪು ಕೊಟ್ಟು ಮಾತಾಡಿಸುವ ದಾರಿಯೂ ಹವ್ದು.

ಅಣ್ಣ, ಅಣ Ka. aṇṇa, aṇa elder brother; respectful address to an older male, affectionate mode of addressing boys; ಅಣ್ಣಿ aṇṇi affectionate mode of addressing females [DED 131]

ಹಾಗಾದರೆ 'ಅಣ್ಣ' ಎಂಬ ಪದದ ಹಿಂದಿರುವ ಗುಟ್ಟೇನು? ಅಣ್ಣ ಎಂಬುದಕ್ಕೆ ಬೇರೊಂದು ಹುರುಳು ಸಿಗುತ್ತದೆ.
ಅಣ್ಣೆ, ಅಣ್ಣ, ಅಣ Ka. aṇṇe, aṇṇa, aṇa excellence, purity  [DED 110]
ಅಂದರೆ 'ಅಣ್ಣ' ಎಂಬುದು ಮೇಲ್ಮಟ್ಟದ ಒಂದು ಪರಿಚೆಯನ್ನು ತಿಳಿಸುತ್ತದೆ.

ಅಣ್ಣಾಲಿಗೆ (ಅಣ್ಣ+ನಾಲಿಗೆ) aṇṇālige uvula [DED 110]
ಬಾಯಿ ಒಳಗೆ ಮೇಲಿನಿಂದ ಜೋತು ಬಿದ್ದ ನಾಲಿಗೆಗೆ ಅಣ್ಣಾಲಿಗೆ ಎನ್ನುತ್ತಾರೆ. ಇಲ್ಲೂ 'ಮೇಲೆ' ಎಂಬ ಹುರುಳನ್ನು ಇದು ಸೂಚಿಸುತ್ತಿರುವುದನ್ನು ಗಮನಿಸಬಹುದು.

ಇನ್ನು ನಮ್ಮದೇ ಆದ ತುಳುವಿನಲ್ಲಿ ಈ ಕೆಳಕಂಡ ಪದಗಳು ಈ ಹುರುಳನ್ನೇ ತೋರಿಸುತ್ತದೆ.
ಅಣಾವುನಿ, ಅಣ್ಣಾವುನಿ Tu. aṇāvuni, aṇṇāvuni to look up, lift up the face, gaze [DED 110]

ಇದಲ್ಲದೆ ಮಯ್ಸೂರು ಕಡೆ ಆಡುನುಡಿಯಲ್ಲಿರುವ ಬಳಕೆಯಿದೆ
೧. ವಸಿ ಅನ್-ತ್-ಕೊ, ಮುಕ ಸರಿಯಾಗ್ ನೋಡಂವ್ [ಕೊಂಚ ಮೇಲೆ ಮಾಡು, ಮುಕವನ್ನು ಸರಿಯಾಗಿ ನೋಡೋಣ]
೨. ಅನ್-ತ್-ಕೊಂಡ್ ನೋಡು..ಆವಾಗ್ ಕಾಣುತ್ತೆ

'ಅಣ' ಎಂಬ ಪದಕ್ಕೆ 'ತ್' ಎಂಬ ಒಟ್ಟು( ಹಿಂಬೊತ್ತಿನ) ಸೇರಿದ್ದರಿಂದ ಅಲ್ಲಿ ಉಲಿ ಮಾರ್ಪಾಟಾಗಿ 'ಅನ್' (ಅನ್-ತ್) ಎಂದಾಗಿದೆ ಯಾಕಂದರೆ ಮುಂದೆ 'ತ' ಇದ್ದರೆ 'ಣ'ಕಾರ ಉಲಿಯಲು ಬರುವುದಿಲ್ಲ, ಅದು ತಾನಾಗಿಯೇ 'ನ್'ಕಾರವಾಗುತ್ತದೆ.

ಅಣ್ಣನಾದವನು (ಬೆಳೆಯುವಾಗ) ತಮ್ಮನಿಗಿಂತ ಎತ್ತರವಾಗಿರುತ್ತಾನೆ. ಅಣ್ಣನು ಅವನ ತಮ್ಮನಿಗಶ್ಟೆ 'ಅಣ್ಣ', ಯಾಕಂದರೆ ತಮ್ಮನು ಯಾವಾಗಲೂ ಮೇಲೆ (ತಲೆ ಎತ್ತಿ) ನೋಡಬೇಕಾಗುತ್ತದೆ. ಇಲ್ಲೂ 'ಮೇಲೆ' ಎಂಬ ಹುರುಳಿಗೆ ನಂಟಿರುವುದನ್ನು ಗಮನಿಸಬಹುದು. ಬರೀ ಎತ್ತರದಲ್ಲಲ್ಲದೆ ಹಲವು ಬೇರೆ ವಿಶಯಗಳಲ್ಲೂ ಅಣ್ಣನು ತಮ್ಮನಿಗೆ 'ಮೇಲ್ಪಂಕ್ತಿ'ಯನ್ನು ತನಗೆ ಅರಿವಿಲ್ಲದೆಯೇ ಹಾಕಿಕೊಡುತ್ತಾನೆ.

No comments:

Post a Comment