ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Thursday, September 20, 2012

ನೆನ್ನೆ, ಮೊನ್ನೆ, ನಾಳೆ, ನಾಳಿದ್ದು

ಈ ಎಲ್ಲ ಪದಗಳನ್ನು ನೋಡಿದರೆ ತಿಳಿಯುವುದು ಇವುಗಳು ಯಾವುದೊ ಒಂದು ಪದದಿಂದ ಆಗಿರುವುದೆಂದು. ಬನ್ನಿ ನೋಡೋಣ

೧. ನೆರೆ+ನಾಳು = ನೆರ್ನಾಳು = ನೆನ್ನಾಳು => ನೆನ್ನೆ
೨. ಮುನ್+ನಾಳು = ಮುನ್ನಾಳು => ಮುನ್ನೆ=> ಮೊನ್ನೆ
೩. ಎದುರು+ನಾಳು = ನಾಳು+ಎದುರು => ನಾಳೆದುರು => ನಾಳೆ
೪. ನಾಳು+ಇರ್ದು = ನಾಳಿರ್ದು = ನಾಳಿದ್ದು => ನಾಡಿದ್ದು => ನಾಡದು

ಈ ಎಲ್ಲ ಪದಗಳಲ್ಲಿ ಬಂದಿರುವುದು ’ನಾಳು’ ಎಂಬುದು. ಈ ಪದಕ್ಕೆ ದಿನ, ದಿವಸ, ಹಗಲು, ಹೊತ್ತು ಎಂಬು ಹುರುಳುಗಳಿವೆ. Ka. nāḷ day, time; [DED 3656]

ಈಗ ಒಂದೊಂದಾಗಿ ನೋಡೋಣ:-

೧. ನೆನ್ನೆ
ನೆರೆನಾಳು ಎಂಬುವಲ್ಲಿರುವ ನೆರೆ ಮತ್ತು ನಾಳು ಎಂಬೆರಡು ಪದಗಳಿವೆ. ನಾಳು ಎಂಬುದಕ್ಕೆ ಈಗಾಗಲೆ ಹುರುಳನ್ನು ಕೊಡಲಾಗಿದೆ. ನೆರೆ ಎಂಬುದಕ್ಕೆ ಹತ್ತಿರ, ಅಕ್ಕಪಕ್ಕ ಎಂಬ ಹುರುಳುಗಳಿವೆ. Ka. nere n. adjoining, proximity, neighbourhood [DED 3770] .ಅಂದರೆ ಅಕ್ಕಪಕ್ಕದ ದಿನ ಅಂತಾಯಿತು. ಅಕ್ಕಪಕ್ಕದ ದಿನದಲ್ಲಿ ಒಂದನ್ನು ತೆಗೆದುಕೊಂಡರೆ ’ಹಿಂದೆ ಹೋದ ದಿನ’, ಹಿಂದಿನ ನಾಳು ಎಂದಾಯಿತು. ಇದನ್ನೇ ಅಲ್ಲವ ’ನೆನ್ನೆ’/'ನಿನ್ನೆ’ ಎನ್ನುವುದು. ಇಲ್ಲಿ ನೆನ್ನೆ=> ನಿನ್ನೆ ಆಗಿರುವುದರಲ್ಲಿ ಅಂತಹ ಅಚ್ಚರಿಯೇನು ಇಲ್ಲ. ನೆ ಮತ್ತು ನಿ ಯಲ್ಲಿರುವುದು ಎ ಮತ್ತು ಇ ಎಂಬ ತೆರೆಯುಲಿಗಳು. ಎ ಮತ್ತು ಇ ತೆರೆಯುಲಿಗಳು ’ಯ’ ಗುಂಪಿಗೆ ಸೇರಿವೆ. ಹೀಗೆ ಆಗುವುದು ಕನ್ನಡಕ್ಕೆ ತೀರ ಸಹಜ ಎನ್ನಬಹುದು. Ka. ninne yesterday, time lately passed [DED 3758]

. ಮೊನ್ನೆ
ಮುನ್ನಾಳು ಎಂಬುವಲ್ಲಿರುವ ಮುನ್ ಎಂಬ ಒಟ್ಟಿಗೆ ಈ ಹುರುಳುಗಳನ್ನು ಕೊಡಲಾಗಿದೆ. Ka. mun (muṃ), munnu that which is before, in front of, or preceding in space, that which is preceding in time, that which is towards a place (etc.), in front or onward, that which is following [DED 5020 (a)]
ಇದರಲ್ಲಿ ಗಮನಿಸಬೇಕಾಗಿರುವುದು that which is preceding in time ಎಂಬ ಹುರುಳನ್ನು. ಮುನ್ ಎಂಬುದು ’ಹೊತ್ತಿನಲ್ಲಿ ಬರುವ ಮುನ್ತನ’ಕ್ಕೊ ಬಳಸಬಹುದು. ಅಂದರೆ ಮುಂಚೆಯೇ ಬಂದ ನಾಳು, ಮುಂಚೆಯೇ ಆಗಿ ಹೋದ ನಾಳು ಎಂಬ ಹುರುಳನ್ನು ಇದು ಕೊಡುತ್ತದೆ. ಇಲ್ಲಿರುವ ಮುನ್ನೆ => ಮೊನ್ನೆ ಆಗಿರುವುದರಲ್ಲಿ ಅಚ್ಚರಿಯೇನೂ ಇಲ್ಲ ಯಾಕಂದರೆ ಮು ಮತ್ತು ಮೊ ದಲ್ಲಿರುವ ’ಉ’ ಮತ್ತು ’ಒ’ ಎಂಬ ತೆರೆಯುಲಿಗಳು ’ವ’ ಗುಂಪಿಗೆ ಸೇರಿವೆ. Ka. monne day before yesterday; the other day, lately [DED 5020 (b)]

. ನಾಳೆ
ಎದುರ್ನಾಳು, ನಾಳೆದುರು ಎಂಬ ಕೂಡುಪದಗಳಲ್ಲಿರುವುದು ಎದುರು ಎಂಬುದಕ್ಕೆ ಈ ಹುರುಳುಗಳನ್ನು ಕೊಡಲಾಗಿದೆ. Ka. idir, idaru, iduru, edaru, edir, edur that which is opposite, the front, in front, ಇದರಲ್ಲಿ the front, in front ಎಂಬ ಹುರುಳುಗಳು ಇಲ್ಲಿ ಹೊಂದುತ್ತವೆ. ನಾಳೆ ಎಂದರೆ ಎದುರು ಇರುವ ನಾಳು, ಎದುರ್ಗೊಳ್ಳಬೇಕಾದ ನಾಳು. ಈವೊತ್ತಿನಲ್ಲಿ ನಿಂತು ನೋಡಿದಾಗ ನಾಳೆ ಎಂಬುದರ ಈ ಹುರುಳು ತಿಳಿಯಾಗುತ್ತದೆ/ಸ್ಪಶ್ಟವಾಗುತ್ತದೆ. ಆದರೆ ಇಲ್ಲಿ ಗಮನಿಸಬೇಕಾಗಿರುವುದು:-

ಎದುರ್+ನಾಳು = ಎದುರ್ನಾಳು => ಎನ್ನಾಳು ಅಂತ ಆಗಬೇಕಾಗಿತ್ತು ಆದರೆ

ನಾಳು +ಎದುರ್ = ನಾಳೆದುರು => ನಾಳೆ ಅಂತ ಆಗಿದ್ದೇಕೆ ಎಂಬುದಕ್ಕೆ ಸರಿಯಾದ ಉತ್ತರ ಹೇಳಲಾಗದು. ಪದಗಳು ತಮ್ಮ ಹುಟ್ಟು ಪಡೆಯುವಲ್ಲಿ ಎಕ್ಕಸೆಕ್ಕತನ(randomness) ಹೊಂದಿಯೇ ಇರುತ್ತವೆ. ಅದಕ್ಕೆ ನುಡಿಯರಿಗರು ಹೀಗೆ ಹೇಳುತ್ತಾರೆ - ನುಡಿಯರಿಮೆಯಲ್ಲಿ ಕಟ್ಟಲೆಯಂಬುದಿಲ್ಲ, ಇರುವುದೆಲ್ಲ ಒಲವುಗಳೇ. ಇಲ್ಲವೆ ಕಟ್ಟಲೆಯೆಂಬುದಿದ್ದರೆ ಅದಕ್ಕೆ ಹೊರತುಗಳು ಇದ್ದೇ ಇರುತ್ತವೆ. ನಾಳೆ ಎಂಬುದು ಆದಕ್ಕೆ ಸರಿಯಾದ ಎತ್ತುಗೆಯಾಗಿದೆ. Ka. nāḷe the very next day, tomorrow; nāḍadu, nāḍidu, nāḍiddu, nāḷiddu, nāḷirdu the day after tomorrow. [DED 3656]

. ನಾಳಿದ್ದು
ಇದಕ್ಕೆ ನಾಡದು, ನಾಡಿದು, ನಾಡಿದ್ದು, ನಾಳಿರ್ದು ಎಂಬ ಹಲವು ರೂಪಗಳಿವೆ. ಇದರಲ್ಲಿ ನಾಳಿರ್ದು ಎಂಬ ಪದವೇ ಹಳೆಯದು ಎಂದು ತೋರುತ್ತದೆ ಯಾಕಂದರೆ,

ನಾಳು+ಇರ್-ದು ಎಂಬುವಲ್ಲಿರುವ ’ಇರ್’ ಎಂಬ ಪದಕ್ಕೆ ಕಿಟ್ಟೆಲ್ ಅವರು ತಮ್ಮ ಪದನೆರಕೆಯಲ್ಲಿ ’pulling, dragging near or away' ಎಂಬ ಹುರುಳುಗಳನ್ನು ಕೊಟ್ಟಿದ್ದಾರೆ. ಈ ’ಇರ್’ ಎಂಬ ಪದವು ಹಳಗನ್ನಡದ ’ಇೞ್’ ಎಂಬ ಪದದಿಂದ ಬಂದಿದೆ. ಹಾಗಾದರೆ ನಾಳೆಯೆಡೆಗೆ ತೆವಳಿಕೊಂಡು ಬರುತ್ತಿರುವ ನಾಳು, ನಾಳೆಗೆ ಹತ್ತಿರದ ನಾಳು, ನಾಳೆಯ ಕಡೆಗೆ ಎಳೆಯುತ್ತಿರುವ ನಾಳು, ನಾಳಿರ್-ದು ಎಂದು ಅರಿತುಕೊಳ್ಳಬಹುದು. ಇನ್ನು ’ರ್’ಕಾರವಾದ ಮೇಲೆ ’ತ’ಕಾರ/’ದ’ಕಾರ ಬಂದೆಡೆಯಲ್ಲಿ ’ರ’ಕಾರವು ಬಿದ್ದು ಹೋಗಿ ತ್/ದ್ ಇಮ್ಮಡಿಯಾಗುವುದು ಹೊಸಗಾಲದ ಕನ್ನಡದ ಒಲವುಗಳಲ್ಲಿ ಒಂದು. ಇದಕ್ಕೆ ಕೆಲವು ಎತ್ತುಗೆಗಳನ್ನು ನೋಡಬಹುದು:-
೧. ಬರ್-ತಾ ಇದೆ => ಬತ್ತಾ ಇದೆ
೨. ಅರ್ತಿಗೆ => ಅತ್ತಿಗೆ
೩. ಬಿರ್ದಿನ => ಬಿದ್ದಿನ

ಹಾಗಾಗಿ ನಾಳಿರ್ದು => ನಾಳಿದ್ದು ಆಗಿರುವುದರಲ್ಲಿ ಅಚ್ಚರಿಯೇನಿಲ್ಲ. Ka. nāḍadu, nāḍidu, nāḍiddu, nāḷiddu, nāḷirdu the day after tomorrow. [DED 3656]

ಇನ್ನು ನಾಡದು, ನಾಡಿದ್ದು, ನಾಡಿದು ಅಂದರೆ ಳ ಕಾರ ಡ ಕಾರ(ಇಲ್ಲವೆ ಣ ಕಾರ) ಕ್ಕೆ ತಿರುಗಿರುವುದು. ಇದನ್ನು ನಾವು ಕನ್ನಡ ನುಡಿಹಿನ್ನಡವಳಿ(ನುಡಿಚರಿತ್ರೆ)ಯಲ್ಲಿ ಹೆಚ್ಚು ನೋಡಬಹುದು:-
೧. ನೊಳ => ನೊಣ
೨. ಕಾಳು => ಕಾಡು (ಕಾಳ್ಗಿಚ್ಚು => ಕಾಡ್ಗಿಚ್ಚು)
೩. ಕುಳಿರ್ => ಕುಣ್-ಡ್-ರು ( sit down)

ಕೊಸರು: ನೆನ್ನೆ(<ನೆನ್ನಾಳು), ಮೊನ್ನೆ(<ಮುನ್ನಾಳು) ಎಂಬುವಲ್ಲಿ 'ಳ' ಕಾರ ಬಿದ್ದುಹೋಗಿರುವುದು ಅಚ್ಚರಿಯೇನಲ್ಲ.  ಕನ್ನಡದ ಕೆಲವು ಒಳನುಡಿಗಳಲ್ಲಿ ಹೀಗೆ ಆಗಿರುವುದರ ಕುರಿತು ಇಲ್ಲೊಂದು ಮಿಂಬರಹ ಬರೆದಿದ್ದೆ.

4 comments:

 1. ತುಂಬಾ ಚೆನ್ನಾಗಿದೆ.

  -ಅನಿಲ್.

  ReplyDelete
 2. ತುಂಬಾ ಸುಳುವಾಗಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಲವರಿಕೆಗಳು.

  ReplyDelete
 3. ಕನ್ನಡ ನುಡಿಯ ಬಗೆಗಿನ ನಿಮ್ಮ ಹುರುಪು ದಿಟಕ್ಕೂ ಮೆಚ್ಚತಕ್ಕದ್ದೇ. ಸೊಗಸಾದ ಕೆಲಸ ಇದು. ಈ ಬರಹ ಕೂಡ ಸೊಗಸಾಗಿ ಬಂದಿದೆ.

  ReplyDelete
 4. ನನ್ನಿ, ಪದನ್ಯಾಸ ಅರುಹಿದಕೆ.

  ReplyDelete