ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Tuesday, October 30, 2012

ಅಕ್ಕಿ

ಅಕ್ಕಿಯೆಂಬುದು ನಮ್ಮ ಊಟ-ತಿಂಡಿಗಳಲ್ಲಿ ಹೆಚ್ಚು ಬಳಸುವ ದಾನ್ಯ. ಎಶ್ಟೊ ಮಂದಿಗೆ ಏನು ತಿಂದರೂ ಒಂದು ತುತ್ತು ಅನ್ನ ತಿನ್ನದಿದ್ದರೆ ಮನ ತಣಿಯುವುದಿಲ್ಲ. ಅಕ್ಕಿಯ ಮತ್ತು ಅದರಿಂದ ಮಾಡುವ ’ಅನ್ನ’ದ ಮೇಲೆ ಹಲವು ಗಾದೆಮಾತುಗಳು ನಿಂತಿವೆ.

೧. ಅಕ್ಕಿ ಮೇಲೂ ಆಸೆ , ನಂಟರ ಮೇಲೂ ಒಲವು
೨. ಅನ್ನ ತಿಂದ ಮನೆಗೆ ಕನ್ನ ಹಾಕಬಾರದು

ಇದಲ್ಲದೆ ಹಲವು ಬಗೆಯ ಅಕ್ಕಿಗಳು ಇಲ್ಲವೆ ಅಕ್ಕಿಯ ಹಾಗೆ ಕಾಣುವ ಬೀಜ ಇಲ್ಲವೆ ದಾನ್ಯಗಳು ಇವೆ. ಕಿಟ್ಟೆಲ್ ಪದನೆರಕೆಯಿಂದ:-

ಅವಲಕ್ಕಿ = ಅವಲ್+ಅಕ್ಕಿ
ಏಲಕ್ಕಿ = ಏಲ+ಅಕ್ಕಿ, ಯಾಲಕ್ಕಿ = ಯಾಲ+ಅಕ್ಕಿ(cardamom)
ಬಿದಿರಕ್ಕಿ = ಬಿದಿರು+ಅಕ್ಕಿ
ಸಬ್ಬಕ್ಕಿ = ಸಬ್ಬ(?)+ಅಕ್ಕಿ
ಕುದಕಲಕ್ಕಿ = ಕುದಕಲ್+ಅಕ್ಕಿ, ಕುಸಲಕ್ಕಿ =ಕುಸಲ್+ಅಕ್ಕಿ
ಬೆಣತಕ್ಕಿ = ಬೆಣತ್+ಅಕ್ಕಿ = ಬೆಳತ್+ಅಕ್ಕಿ ( ಬಿಳಿ ಅಕ್ಕಿ)
ಕೇಸಕ್ಕಿ= ಕೇಸ್+ಅಕ್ಕಿ
ಜೀರಾಸಣ್ಣಕ್ಕಿ, ದಪ್ಪಕ್ಕಿ, ದೇವಮಲ್ಲಿಗೆಯಕ್ಕಿ, ದೊಡ್ಡ ಬಯ್ರ್ ಅಕ್ಕಿ, ಪುಟ್ಟರಾಜಕ್ಕಿ, ಬಗಡೆಯಕ್ಕಿ,
ನವಣೆಯಕ್ಕಿ, ಸಾಮೆಯಕ್ಕಿ, ಹಾರಕದಕ್ಕಿ

ಹಾಗಾದರೆ ’ಅಕ್ಕಿ’ ಎಂಬ ಪದದ ಗುಟ್ಟೇನು ಎಂದು ನೋಡಿದಾಗ:-

ಅರಿ+ಕೆ = ಅರಿಕೆ (ಅರಿ ಎಂಬ ಎಸಕಪದಕ್ಕೆ ’ಕೆ’ ಎಂಬ ಒಟ್ಟನ್ನು ಸೇರಿಸಿ ಅರಿಕೆ ಎಂಬ ಹೆಸರುಪದ ಮಾಡಲಾಗಿದೆ)

ಅರಿ ಎಂಬುದಕ್ಕೆ ಕನ್ನಡದಲ್ಲಿ ’ತುಂಡು ಮಾಡು’, ’ಕತ್ತರಿಸು’ ಎಂಬ ಹುರುಳಿದೆ. Ka. ಅರಿ ari (ಅರಿದ್ arid-) to cut or lop off; n. cutting off, gnawing as vermin, a handful or more of corn cut at one stroke; ಅರಿಸು arisu to cause to cut off; ಅರಿವಾಳ್ arivāḷ, ಅರುವಾಳ್ aruvāḷ sickle.ಅಂದರೆ ಕುಡುಗೋಲು [DED 212]
ಕನ್ನಡಿಗರು(ಒಟ್ಟಂದದಲ್ಲಿ ದ್ರಾವಿಡ ನುಡಿಯಾಡುವವರು) ಮೊದಮೊದಲು ಉಳುಮೆಯನ್ನು ಮಾಡಿ ಬತ್ತದ ಬೆಳೆ ತೆಗೆದು ಈ ರೀತಿ ಕತ್ತರಿಸಿ ಇಲ್ಲವೆ ’ಕಟಾವು’ ಮಾಡಿ ಮೊದಮೊದಲು ಪಡೆದ ದಾನ್ಯ ಈ ’ಅಕ್ಕಿ’ಯೇ ಇರಬೇಕು. ಹಾಗಾಗಿ ’ಅರಿಕೆ’ ಎಂಬುದು ಹೆಸರು ಪದವಾಗಿ ಅದಕ್ಕೆ ’ಕತ್ತರಿಸಿದ್ದು’ ಇಲ್ಲವೆ ’ಕಟಾವು ಮಾಡಿ ತೆಗೆದದ್ದು’ ಹುರುಳಿದೆ. ಕನ್ನಡ ನುಡಿ ಹಿನ್ನಡವಳಿಯನ್ನು ಗಮನಿಸಿದಾಗ ’ರ್’ ಕಾರದ ಮುಂದೆ ಯಾವುದೇ ಮುಚ್ಚುಲಿಯು ಬಂದಾಗ ಈ ’ರ್’ ಕಾರವು ಬಿದ್ದು ಹೋಗಿ ಅದರ ಮುಂದಿನ ಮುಚ್ಚುಲಿಯು ಇಮ್ಮಡಿಯಾಗುತ್ತದೆ.

ಎತ್ತುಗೆಗೆ:
೧. ಸುರ್ಕು => ಸುಕ್ಕು, ಇರ್ಕು => ಇಕ್ಕು, ಉರ್ಕು => ಉಕ್ಕು, ಬೆರ್ಕು => ಬೆಕ್ಕು
೨. ಅರ್ಗಳ => ಅಗ್ಗಳ
೩. ಚುರ್ಚು => ಚುಚ್ಚು, ಮರ್ಚು=> ಮೆಚ್ಚು
೪. ಕರ್ತಲೆ => ಕತ್ತಲೆ
೫. ಉರ್ದು=> ಉದ್ದು, ಮರ್ದು => ಮದ್ದು

ಹಾಗೆಯೇ, ಅರಿಕೆ====ಮಾತಿನ ಸವೆತದಿಂದ ಇ’ಕಾರ ಬಿದ್ದು ಹೋಗಿ===> ಅರ್ಕೆ => ಅಕ್ಕೆ=> ಅಕ್ಕಿ

ಅಕ್ಕೆ => ಅಕ್ಕಿ ಆಗಿರುವುದು ಕನ್ನಡದ ಆಡುನುಡಿಯ ಮಟ್ಟಿಗೆ ಸಹಜವಾದುದೇ. ತೆಂಕು ಮತ್ತು ಬಡಗು ಕರ್ನಾಟಕದ ಆಡುನುಡಿಗಳಲ್ಲಿ ಬರಹಗನ್ನಡದ ಪದದ ಕೊನೆಯಲ್ಲಿರುವ ’ಎ’ಕಾರವು ’ಇ’ಕಾರಕ್ಕೆ ತಿರುಗಿದೆ.

ಎತ್ತುಗೆಗೆ :
ಮನೆ => ಮನಿ(house) - ಬಡಗು ಕರ್ನಾಟಕದಲ್ಲಿ ಮಾತ್ರ
ಬರೆ => ಬರಿ (write) - ತೆಂಕು ಮತ್ತು ಬಡಗು ಕರ್ನಾಟಕ

ಇದೆಲ್ಲಕ್ಕು ಇಂಬು ಕೊಡುವಂತೆ ನಡುವಣ ದ್ರಾವಿಡ ನುಡಿಗುಂಪಿಗೆ ಸೇರಿದ
*ಕೊಲಾಮಿ ನುಡಿಯಲ್ಲಿ Kol. ark- (arakt-) to harvest ಅಂದರೆ ಕಟಾವು/ಸುಗ್ಗಿ ಮಾಡು [DED 212]
*ನೈಕಿ(ಚಂದ) ನುಡಿಯಲ್ಲಿ Nk. (Ch.) ark- to cut paddy, harvest ಅಂದರೆ ಬತ್ತವನ್ನು ಕಡಿ ಇಲ್ಲವೆ ಸುಗ್ಗಿ ಮಾಡು [DED 212]
ನೈಕಿ ನುಡಿಯಲ್ಲಿ ನೇರವಾಗಿ ’ಬತ್ತವನ್ನು ಕಡಿ’ ಎಂಬ ಹುರುಳೇ ಇರುವುದರಿಂದ, ಮೇಲೆ ಹೇಳಿರುವ ’ಅಕ್ಕಿ’ಯ ಪದಗುಟ್ಟಿಗೆ ಇನ್ನಶ್ಟು ಆನೆಬಲವನ್ನು ಒದಗಿಸುತ್ತದೆ. ಇಂಗ್ಲಿಶಿನ ’rice' ಕೂಡ ’ಅರಿಕೆ’(ಅರಿಸಿ arici) ಯಿಂದ ಬಂದಿರಬಹುದು.

 

No comments:

Post a Comment