ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Sunday, August 12, 2012

ಆರಂಬ

ಈ ಪದಬಳಕೆ ನಮ್ಮ(ಮಂಡ್ಯ, ಮೈಸೂರು) ಕಡೆ ಇದೆ. ಇದಕ್ಕಿರುವ ಹುರುಳು

ಏರಂಬ =ಆರಂಬ = ಉಳುಮೆ= ಬೇಸಾಯ

ಕನ್ನಡದಲ್ಲಿ *ಆರ್*/ಆರು (ಹಾಸನದ ಕಡೆ) ಮತ್ತು *ಏರ್*(ಮಂಡ್ಯ, ಮೈಸೂರು ಕಡೆ) ಪದಬಳಕೆಯೂ ಕೂಡ ಇನ್ನು ಇದೆ. ಇದಕ್ಕೆ ದ್ರಾವಿಡ ಪದನೆರಕೆಯಲ್ಲಿ ಈ ಹುರುಳು ಕೊಡಲಾಗಿದೆ. Ka. ēru, ār pair of oxen yoked to a plough.

ಇದನ್ನು ಬಿಡಿಸಿದಾಗ
ಏರ್ಂ+ಪು = ಏರಂಪು =ಏರಂಬ
ಆರ್ಂ+ಪು = ಆರಂಪು =ಆರಂಬ

ಯಾಕಂದರೆ, ಈ ತೆರನಾದ ಪದಕಟ್ಟಣೆ ಈಗಾಗಲೆ ಈ ಎತ್ತುಗೆ ಇದೆ. 
ಇಲ್ಲಿ ’ಪು’ ಎನ್ನುವುದು ’ಹೆಸರು ಪದವನ್ನಾಗಿಸಲು’ ಬಳಸುವ ಒಂದು ಒಟ್ಟು. ಎತ್ತುಗೆಗೆ: ನೆನಪು, ಉಡುಪು,

ತೆನ್+ಪು=> ತೆನ್ಪು= ತೆಂಪು

ಕನ್ನಡದಲ್ಲಿರುವ ಒಂದು ಉಲಿಯೊಲವು ಏನೆಂದರೆ
  "ಕೊರಲಿಸಿದ(ಗ, ಜ, ಡ, ದ, ಬ) ಮತ್ತು ಕೊರಲಿಸದ(ಕ, ಚ, ಟ, ತ, ಪ) ಉಲಿಗಳನ್ನು ಒಂದಕ್ಕೆ ಒಂದರ ಬದಲಾಗಿ ಬಳಸುವುದುಂಟು. ಇದರಿಂದ ಹುರುಳಿನಲ್ಲಿ ಅಂತಹ ವೆತ್ಯಾಸವೇನೂ ಆಗುವುದಿಲ್ಲ."

ಹಾಗಾಗಿ,
ತೆಂಪು => ತೆಂಬು( ದಕ್ಷಿಣ)

ತೆಂಬು +ಎಲರ್ = ತೆಂಬೆಲರ್ = ತೆಂಕಣ ಗಾಳಿ ( ಮಲಯ ಮಾರುತ, ದಕ್ಷಿಣದಿಂದ ಬೀಸುವ ಗಾಳಿ)
ತೆಂಬೆಲರ್ ಎಂಬ ಪದ ಬಳಕೆ ಪಂಪನಿಂದ ಹಿಡಿದು ಆಂಡಯ್ಯನವರೆಗೂ ಹಲವು ಹಳಗನ್ನಡದ ಬರಹಗಳಲ್ಲಿ ಬಳಕೆಯಾಗಿದೆ

No comments:

Post a Comment